ಅಮಾನವೀಯ ಬದುಕಿನ ಅಪಮೌಲ್ಯಗಳು


ನಮ್ಮ ಬದುಕನ್ನೂ, ಬದುಕುತ್ತಿರುವ ರೀತಿಯನ್ನೂ ಒಮ್ಮೆ ಅವಲೋಕಿಸಿ ನೋಡಿದರೆ ಎಂಥಹ ಹೇಸಿಗೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ. ಮನುಷ್ಯನ ಹುಟ್ಟು, ಸಾವು ಹಾಗೂ ಬದುಕುಗಳು ಇತ್ತೀಚೆಗಂತೂ ಅನರ್ಥ ಹಾದಿ ಹಿಡಿದು ನೀರಸವಾಗಿ ಪರಿಣಮಿಸಿವೆ. ಜೀವನ ಯಾಂತ್ರಿಕವಾಗಿದೆ. ಭಾವನಾತ್ಮಕತೆಗೆ ಬೆಲೆಯಿಲ್ಲ. ನೈತಿಕತೆಯ ಅಧಃಪತನವಾಗಿ ಜೀವನದ ಮೌಲ್ಯಗಳೆಲ್ಲಾ ಗಾಳಿಪಾಲಾಗಿವೆ. ಇಂಥಹ ಅಸಂಸ್ಕೃತ ಕಾಲದೊಳಗೆ ನಮಗೂ ಹೀಗೇ ಬದುಕಬೇಕೆಂಬ ಹಂಬಲಗಳಿಲ್ಲ. ಅಪಮೌಲ್ಯಗಳು ಅತಿಯಾಗಿ ಮಾನವ ತನ್ನ ನೀಯತ್ತೆಂಬುದನ್ನು ಹರಾಜು ಮಾಡಿ ಎಲ್ಲಿ ಹೇಗಾದರೂ ಬದುಕುವುದಷ್ಟನ್ನೇ ನೋಡುತ್ತಿದ್ದಾನೆ.

ಮನುಷ್ಯನ ಹುಟ್ಟು ಈ ದೇಶದಲ್ಲಿ ಇಂದು ನಿರಂತರ ಕ್ರಿಯೆಯಾಗಿ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿರುತ್ತಿದ್ದರೆ, ಸಾವು ನಿಷ್ಕರುಣ ಕ್ರಿಯೆಯಾಗಿ ಹೋಗಿದೆ. ವ್ಯಕ್ತಿಯೊಬ್ಬ ಸತ್ತರೆ ಸಮಾಜ ಶೋಕಿಸುವುದಿರಲಿ, ಸ್ವಂತ ಮಂದಿಯೂ ಕ್ಷಣಿಕದ ಬಣ್ಣ ಕಟ್ಟುತ್ತಾರೆ. ಇಂದು ಸತ್ತ ಸ್ಥಳಗಳಲ್ಲೂ ಅದ್ಧೂರಿಯ ಭೋಜನ ವ್ಯವಸ್ಥೆ, ವಿಡಿಯೋ ಹಾವಳಿ, ಸಿನಿಮಾ ಮೋಜು, ಗಣ್ಯರ ಪೌಜು, ಓಡಾಡುವ ಲಲನೆಯರ ಪೋಸು… ಇಂಥಹ ನೂರಾರು ಅವಧ್ಯ ಆಭೋಗಗಳು ತಮ್ಮ ಪ್ರಭುತ್ವ ಸಾಧಿಸಿವೆ. ಇವೆಲ್ಲಾ ನಾವು ಮುಗಿಬಿದ್ದು, ಒಗ್ಗಿಸಿಕೊಳ್ಳುತ್ತಿರುವ ಅರ್ವಾಚೀನ ವ್ಯವಸ್ಥೆಗಳು. ಅವುಗಳ ಮಾತಿರಲಿ. ಇಂಥಹ ದುಸ್ತರ ಜೀವನ ಜಾತ್ರೆಯಲ್ಲಿ ನಮ್ಮ ಅಮಾನವೀಯ ಅಕೃತ್ಯಗಳು ಒಂದೇ, ಎರಡೇ… ನಮ್ಮ ಈ ಕೃತ್ರಿಮಗಳನ್ನೆಲ್ಲಾ ಪ್ರಾಮಾಣಿಕವಾಗಿ ದಾಖಲಿಸಿ ಎಂದಾದರೊಮ್ಮೆ ಪುಟ ತಿರುವಿ ನೋಡಿದರೆ, ಅವುಗಳ ಅರಿವು ನಮಗಾದೀತು.

ನಮ್ಮ ಇಂದಿನ ಈ ದುಷ್ಟ ವ್ಯವಸ್ಥೆಗೆ ಪ್ರಮುಖವಾಗಿ ಮೇಲು-ಕೀಳು, ಬಡವ-ಶ್ರೀಮಂತ, ಅಕ್ಷರ-ನಿರಕ್ಷರ, ಹೆಣ್ಣು-ಗಂಡು, ಜಾತಿ-ಮತ ಇವೇ ಮುಂತಾದ ಏರುಪೇರುಗಳು ಕಾರಣವಾಗಿರುವುದರಿಂದ ಕೆಳ ಸ್ತರದ ಜನಗಳಲ್ಲಿ ಸ್ವಾಭಿಮಾನವೆಂಬುದು ತನ್ನ ಬೆಲೆಯನ್ನು ಕಳೆದುಕೊಂಡು ಅಸಹಾಯಕತೆಯಿಂದ ಪರ್ಯಾವಸಾನವಾಗುತ್ತಿದೆ. ಪ್ರಬಲರು ಅಬಲರ ಆತ್ಮಗೌರವವನ್ನೂ ಖರೀದಿಸಿದವರಂತೆ ಹುಕುಂ ಹೇರುವುದು, ಎಲ್ಲವನ್ನೂ ತಮ್ಮ ಮುಷ್ಠಿಯಲ್ಲಿ ಹಿಡಿದಳೆಯಬಲ್ಲವೆಂಬ ಹುಂಬನೋಟ ಬೀರುವುದು, ಅಸಡ್ಡೆತನವನ್ನು ಮೈಗೂಡಿಸಿಕೊಂಡು ಅಂತಃಕರಣರಹಿತರಾಗಿ ವರ್ತಿಸುವುದು. ಇವೇ ಮುಂತಾದ ದುರಂತಗಳಿಂದ ಕೀಳು ಅಥವಾ ಬಡವ ಎಂಬ ಕೆಳಮಟ್ಟದ ಜನ ತಮ್ಮ ಆತ್ಮಾಭಿಮಾನವನ್ನು ಒತ್ತೆಯಿಟ್ಟು ಬದುಕಬೇಕಾದ ಹೀನ ಸ್ಥಿತಿ ಬಂದೊದಗಿದೆ.

ಬಾಲಕಾರ್ಮಿಕ ಪದ್ಧತಿ ಅಕ್ಷಮ್ಯಪರಾಧ ಎಂದು ತಿಳಿದೂ, ಅದನ್ನು ಲೆಕ್ಕಿಸದೆ ಎಷ್ಟೋ ಶ್ರೀಮಂತ ವರ್ಗ ಮಕ್ಕಳಿಂದ ದುಡಿಸಿಕೊಳ್ಳುವಂಥ ಅಮಾನವೀಯ ಕೆಲಸದಲ್ಲಿ ತೊಡಗಿದೆ. ಅಲ್ಲಿ ಕೇವಲ ಆರು ವರ್ಷದ ಕೆಲಸದಸುಳೆಗೆ ಹತ್ತು-ಹದಿನೈದು ವರ್ಷದ ತನ್ನ ಯಜಮಾನನ ಮಕ್ಕಳನ್ನು ಆರೈಕೆಮಾಡುವ, ಅಡ್ಡಾದಿಡ್ಡಿ ನುಗ್ಗದಂತೆ ಅಡ್ದಗಾವಲಾಗಿರುವ, ಬೀದಿಪಾಲಾದರೆ ಹುಡುಕಿ ಕರೆತರುವ ಬಹು ಜವಾಬ್ದಾರಿಯ ಹೊರೆಯಿರುತ್ತದೆ ಎಂದರೆ, ಇಂಥಹ ಪ್ರಬಲರೆನಿಸಿಕೊಂಡವರ ಬುದ್ಧಿಗೆ ಗ್ರಹಣ ಹಿಡಿದಿದೆಯೆಂದು ಯಾರಿಗಾದರೂ ಅನ್ನಿಸೀತು. ಕೆಳಸ್ತರದ ಜನಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಇರುವುದು ಇಂಥಹ ಕಡೆಗಳಲ್ಲೇ ಹೆಚ್ಚು. ಅದರರ್ಥ ಯಜಮಾನನನ್ನು ದಿಕ್ಕರಿಸಿ ನಡೆವುದೆಂದಾಗಲೀ ಅಥವಾ ಕೂಲಿ ಮಾಡುವುದು ನಿಕೃಷ್ಟವೆಂದಾಗಲೀ ಅಲ್ಲ. ಆತ್ಮಾಭಿಮಾನವನ್ನೂ ಕಾಯ್ದುಕೊಳ್ಳಲಾಗದ ಎಂಥಹ ದುರದೃಷ್ಟ ಪರಿಸ್ಥಿತಿ ಎಂಬುದು. ಇಂಥಹ ಕಡೆ ಮನುಷ್ಯಶಕ್ತಿ ಹೇಗೆ ನಿಸ್ಸಹಾಯಕ ಸ್ಥಿತಿಯಲ್ಲಿರುತ್ತದೆ ಎಂಬುದು. ಇದೊಂದು ಉದಾಹರಣೆಯಷ್ಟೇ. ನಾವು ಇಂಥಹ ಅದೆಷ್ಟೋ ಅಕೃತ್ಯಗಳನ್ನು ಗಮನಿಸಿರುವುದಿಲ್ಲ. ಅಬಲರಿಗೆ ಸಹಕಾರದ ರಕ್ಷಣೆ ನೀಡಿ ಇಂಥಹ ಅರ್ಥಹೀನ ವ್ಯವಸ್ಥೆಯನ್ನು ಹತ್ತಿಕ್ಕುವ ಅದೆಷ್ಟು ಮಂದಿ ನಮ್ಮೊಳಗಿದ್ದಾರೆ? ಗಂಟಿದ್ದ ಕಡೆಗೇ ವಾಲುವ ಪ್ರವೃತ್ತಿ ನಮ್ಮದು. ಸುಮ್ಮನಾಗಿಬಿಡುತ್ತೇವೆ.

ನಾವು ನಿತ್ಯ ಕಾಣುವ, ಕೇಳುವ, ಎಸಗುವ ಸಣ್ಣ ಘಟನೆಗೆಳನ್ನಷ್ಟೇ ಗಣನೆಗೆ ತೆಗೆದುಕೊಂಡರೆ, ಅವುಗಳಲ್ಲೇ ಕೋಟಿ ಪ್ರಮಾದಗಳಿರುತ್ತವೆ. ಇನ್ನು ಅಗಾಧ ಪ್ರಮಾಣದಲ್ಲಿ ಸ್ವಲ್ಪ ಶ್ರೀಮಂತರೋ ಅಥವಾ ಅತೀ ದೊಡ್ಡವರೆನಿಸಿಕೊಂಡ ಪ್ರಭೃತಿಗಳ ಮಧ್ಯೆ ನಡೆಯುವ ಪಾಪ-ಪಾತಕ ಕೃತ್ಯಗಳೆಷ್ಟು? ಪ್ರವಾಹ ಪ್ರಮಾಣದಲ್ಲಿರುತ್ತವೆ. ಇವುಗಳಿಗೆಲ್ಲಾ ದಂಡನೆಯ ಮಾತಂತಿರಲಿ, ಮಾತಿನಲ್ಲೂ ಹೇಳಲಾಗದ, ಕೇಳಲಾಗದ ಅಸಹಾಯಕತೆ ನಮ್ಮ ಪ್ರಜಾಪ್ರಭುತ್ವದ ಪ್ರಜೆಗಳದು. ಅರ್ಥಾತ್ ನಮ್ಮದು. ಅಂದಮೇಲೆ ನಮಗೆಲ್ಲಾ ನಾಚಿಕೆಯೇ ಇಲ್ಲವೆಂದಾಯಿತಲ್ಲವೇ?

ಇಂಥಹದೊಂದು ಸಾಮಾಜಿಕ ವ್ಯವಸ್ಥೆಯ ನೆರಳಿನಲ್ಲಿ ಬದುಕು ರೂಪಿಸಿಕೊಂಡು ಬಾಳುವೆ ನಡೆಸುತ್ತಿರುವ ನವಭಾರತದ ಪ್ರಜಾಕೋಟಿಗೆ ಕಿಂಚಿತ್ತು ಛಲವಿದ್ದರೂ ಸಾಕು, ಮಾನವತಾವಾದಿಗಳು ಕಂಡಿದ್ದ ಕನಸನ್ನು ನನಸಾಗಿಸಬಹುದು. ಆದರೆ, ನಾವುಗಳೆಲ್ಲಾ ನಮ್ಮ ನಮ್ಮೊಳಗೇ ಬೀಗುತ್ತಾ,”ಇರುವಷ್ಟರಲ್ಲೇ ಅಷ್ಟು” ಎಂಬ ಅತೃಪ್ತ ಭಾವದೊಂದಿಗೆ ಬದುಕುತ್ತಾ, ಆಸೆಗಳಿಗಷ್ಟು ಆಸೆಗಳನ್ನು ಬೆಸೆಯುತ್ತಾ ನಾಶಹೊಂದುತ್ತಿದ್ದೇವೆ. ಪ್ರಬಲರಲ್ಲಿ ಫಲ ಬೇಡುವ ಫಕೀರರಾಗುತ್ತಿದ್ದೇವೆ. ಇದೆಲ್ಲದರ ಜೊತೆಗೆ ಅಸತ್ಯಗಳನ್ನೇ ಸತ್ಯಗಳೆಂದು ನಿರೂಪಿಸುತ್ತಾ ಯಾವುದೋ ಕ್ಷಣಿಕ ಸುಖಕ್ಕಾಗಿ ಅವಿರತ ಹೋರಾಡುತ್ತಿದ್ದೇವೆ.

ಒಂದು ವರ್ಗದ ಜನರಿಗಿವೆಲ್ಲಾ ಏನೂ ಅನ್ನಿಸದಿರಬಹುದು, ಆದರೆ, ಈ ದೇಶದೊಳಗಿನ ಇಂಥಹ ಅಸಹನೀಯ ನಡವಳಿಕೆಗಳ ಜೊತೆಗೆ ಆಗಾಗ್ಗೆ ಕಾಣುವ ಮನುಷ್ಯನ ನೀಚತನ, ದುರ್ನಯ, ಕುಬುದ್ಧಿಗಳು, ಧಾರ್ಮಿಕ ಕಂದಾಚಾರಗಳು, ನಮ್ಮ ಸಾಮಾಜಿಕ ಬದಲಾವಣೆಗಳು, ಪ್ರಾಂತೀಯ ವರ್ಗೀಕರಣ, ಸಾರ್ವಜನಿಕ ಮೌಲ್ಯಗಳ ಅಪಹರಣ, ಭೀಭತ್ಸ್ಯ ರಾಜಕಾರಣಿಗಳ ಭಾರಿ ಹಗರಣ ಇಂಥಹ ನೂರಾರು, ಸಾವಿರಾರು ಕ್ಷುಲ್ಲಕಗಳು ಸಜ್ಜನರಲ್ಲಿ, ಮಾನವಂತರಲ್ಲಿ, ಬುದ್ಧಿಜೀವಿಗಳಲ್ಲಿ ಹಾಗೂ ನಿಸ್ಪೃಹ ಹೋರಾಟಗಾರರಲ್ಲಿ ಮಾನವೀಯತೆಯ ಮಾರಣಹೋಮ ನಡೆಸಿವೆಯಲ್ಲಾ, ಇಲ್ಲಿ ವಿವೇಕವೆಂಬುವುದು ಬದುಕುವುದಾದರೂ ಹೇಗೆ?

ಈ ಪ್ರಶ್ನೆಗಳು ಬಹುಶಃ ಎಲ್ಲರ ಎದೆಯಾಂತರಾಳದಲ್ಲೂ ಮೂಡಿದ್ದಿದ್ದರೆ ಇಂದು ಭಾರತ ಬಲಿಷ್ಟ ರಾಷ್ಟ್ರವಾಗಿರುತ್ತಿತ್ತು. ಆದರೆ, ಅರ್ಥವಿಲ್ಲದ ಹಗರಣಗಳನ್ನೇ ಅದ್ಭುತಗಳೆಂದು ಭಾವಿಸುತ್ತಾ, ತನ್ನ ಸ್ವಶಕ್ತಿಯ ಬಲವನ್ನೇ ನಿಷ್ಕ್ರೀಯಗೊಳಿಸಿಕೊಂಡು, ನಾಯಕರನ್ನು ಪೂಜಿಸುವ ಭಟ್ಟಂಗಿ ಕೆಲಸಗಳಲ್ಲೇ ಕಾಲ ಕಳೆಯುತ್ತಾ, ಶ್ರಮವಿಲ್ಲದೇ ಬದುಕುವ ಚಾಲಿಗೆ ಇಡೀ ಮನುಕುಲವೇ ದಡದಡನೆ ನುಗ್ಗಲಾರಂಭಿಸಿದೆ. ಇಂಥಹ ಅವದೂತ ಜನರ, ಜನನಾಯಕರ, ಅಧಿಕಾರಿಗಳ ಅಭಿಮಾನಶೂನ್ಯತೆಯೊಳಗೂ ಭಾರತ ತನ್ನ ಭವಿಷ್ಯವನ್ನು ಹುಡುಕಿಕೊಳ್ಳಲು ಸರ್ವ ಪ್ರಯತ್ನ ನಡೆಸುತ್ತಿದೆಯೆಂದರೆ, ನಾವೆಲ್ಲರೂ ಬದಲಾಗಲೇ ಬೇಕು. ಬುದ್ಧಿಯನ್ನು ಬಲಪಡಿಸುವ ನಿಷ್ಪಕ್ಷಕಾರ್ಯನಿರತರಾಗಲೇಬೆಕು. ಇದು ಎಷ್ಟು ಜನಗಳಿಂದ ಸಾಧ್ಯ?

೦೧-೧೨-೧೯೯೫

You may also like...

Leave a Reply