ಕನ್ನಡ ಚಿತ್ರರಂಗದ ಕುತ್ತಿಗೆ ಹಿಸುಕುತ್ತಿರವ ಡಬ್ಬಿಂಗ್ ನಿಷೇಧವೆಂಬ ಭೂತ


ತೀರಾ ಇತ್ತೀಚೆಗೆ ಅಂದರೆ “ರಂಗೀತರಂಗ” ಹಾಗು “ಬಾಹುಬಲಿ” ಎಂಬ ಕನ್ನಡದ ಹಾಗು ಒಂದು ರೀತಿಯಲ್ಲಿ ಕನ್ನಡಿಗರನ್ನೊಳಗೊಂಡಿರುವ ತೆಲುಗಿನ ಚಿತ್ರಗಳು ಚಿತ್ರಮಂದಿರಕ್ಕಾಗಿ ನಡೆಸಿದ ಪೈಪೋಟಿಯನ್ನು ಕರ್ನಾಟಕದ ಜನ ವಿಶಾಲವಾದ ತೆರೆಯ ಮೇಲೆಯೇ ವೀಕ್ಷಿಸಿದ್ದಾಯಿತು. ಒಂದು ಅತೀ ದೊಡ್ಡ ಬಜೆಟ್ಟಿನ, ಅತೀ ದೊಡ್ಡ ಜನಗಳ ಬೆಂಬಲದಿಂದ ನಿರಾಯಾಸವಾಗಿ ಕನ್ನಡನಾಡಿನಲ್ಲಿ ಬಿಡುಗಡೆಯಾದ ತೆಲುಗಿನವರ ಚಿತ್ರ. ಇನ್ನೊಂದು ಹೊಸಬರ, ಹೊಸತನದ ಹಣೆಪಟ್ಟಿಯೊತ್ತು, ಪ್ರೇಕ್ಷಕನಲ್ಲಿ ಹೊಸ ಭರವಸೆ ಹುಟ್ಟಿಸಿಲೇಬೆಕೆಂಬ ಹಂಬಲ ಹೊತ್ತು ಕನ್ನಡಿಗರ ನಾಡಿನಲ್ಲಿ ನಿಲ್ಲಲು ಹೆಣಗಾಡಿದ ಕನ್ನಡದವರ ಚಿತ್ರ. ಇವೆರಡೂ ಚಿತ್ರಗಳು ಒಟ್ಟಿಗೆ ಬಿಡುಗಡೆಯಾದವು ಎಂಬುದೊಂದನ್ನು ಬಿಟ್ಟರೆ ಇನ್ಯಾವ ರೀತಿಯಲ್ಲೂ ಪರಸ್ಪರ ಹೋಲಿಕೆ ಮಾಡಲಾಗದ ಚಿತ್ರಗಳು.

ಇದೇಕೆ ಹೀಗಾಯಿತು? ಯಾರಿಂದ ಹೀಗಾಯಿತು? ಗೊತ್ತಿಲ್ಲ. ಆದರೆ, ಸಮಸ್ಯೆ ಶುರುವಾದದ್ದು ಹೇಗೆ ಎಂದು ಮಾತ್ರ ಗೊತ್ತು, ಕನ್ನಡ ಪ್ರೇಕ್ಷಕನನ್ನು ಸುಮಾರು ವರ್ಷಗಳ ನಂತರ ಚಿತ್ರಮಂದಿರದಲ್ಲಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿ, ತನ್ನ ಹೊಸ ಪ್ರಯೋಗದಿಂದ ಮೆಚ್ಚುಗೆ ಗಳಿಸಿ, ಜನರಿಂದ ಜನರಿಗೆ ಒಂದಷ್ಟು ಒಳ್ಳೆಯ ಮಾತುಗಳು ಪ್ರಚಾರವಾಗುವಂತೆ ಮಾಡಿಕೊಂಡು ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಆರಾಮವಾಗಿ ಯಶಸ್ವೀ ಪ್ರದರ್ಶನ ನೀಡುತ್ತಿದ್ದ “ರಂಗೀತರಂಗ” ವನ್ನು ಅನಾಮತ್ತಾಗಿ ಕಾರಣವಿಲ್ಲದೆ ಚಿತ್ರಮಂದಿರದಿಂದ ಹೊರದಬ್ಬಿದ ಘಳಿಗೆಯಿಂದ. ನಂತರದ ಬೆಳವಣಿಗೆಗಳು ಏನಾಯಿತು ಎಂದು ಇಡೀ ಕರ್ನಾಟಕವೇ ಗಮನಿಸಿದೆ. ಸಾಮಾಜಿಕ ತಾಣಗಳಲ್ಲೂ ಹಿಗ್ಗಾ-ಮುಗ್ಗಾ ಜಗ್ಗಾಡಿದ್ದಾಗಿದೆ. ಪತ್ರಿಕೆಗಳಲ್ಲೂ ಪರ-ವಿರೋಧವಾದ ಅಭಿಪ್ರಾಯಗಳ ಸುರಿಮಳೆಯನ್ನೇ ಸುರಿಸಿದ್ದಾಗಿದೆ. ಹಿಂದೆಯೂ ಅನೇಕಾನೇಕ ಒಳ್ಳೆಯ ಕನ್ನಡ ಚಿತ್ರಗಳು ಬಂದಿದ್ದಾಗಲೂ, ಅವುಗಳನ್ನು ಚಿತ್ರಮಂದಿರಗಳಿಂದಾಚೆಗೆ ದೂಕಿದ್ದಾಗಲೂ, ನಷ್ಟದಿಂದ ನಿರ್ಮಾಪಕ ಅತ್ತು ಕರೆದು ಗೋಳಾಡಿದ್ದಾಗಲಾದರೂ ಪ್ರತಿಭಟಿಸದಿದ್ದ ಕನ್ನಡ ಪ್ರೇಕ್ಷಕ “ರಂಗೀತರಂಗ” ಚಿತ್ರದ ಮುಖಾಂತರ ತನ್ನ ಅಸಹನೆಯನ್ನು ಹೊರಹಾಕಿದ್ದು ಮಾತ್ರ ಪ್ರಶಂಸನೀಯ. ಮೇಲ್ನೋಟಕ್ಕೆ ಹಿಂದೆಯೂ ಹೀಗೆಯೇ ಮಾಡಬಹುದಿತ್ತೆನೋ, ಪ್ರತಿಭಾನ್ವಿತ ನಿರ್ದೇಶಕ ಹಾಗೂ ಕಲಾವಿದರನ್ನು ರಕ್ಷಿಸಬಹುದಿತ್ತೇನೋ ಎಂದೆನಿಸಬಹುದು. ಆದರೆ ಅದಕ್ಕೆ ಪ್ರೇಕ್ಷಕರಷ್ಟೇ ಕಾರಣರಾಗುವುದಿಲ್ಲ. ಚಿತ್ರತಂಡದ ಜವಾಬ್ದಾರಿಯೂ ಇದೆ. ಅಂಥಹ ಜವಾಬ್ದಾರಿಯನ್ನು ಸಮಯೋಜಿತವಾಗಿ ನಿಭಾಯಿಸುವಲ್ಲಿ “ರಂಗೀತರಂಗ” ಚಿತ್ರತಂಡ ಯಶಸ್ವಿಯಾದದ್ದು ಮಾತ್ರ ಮೆಚ್ಚಲೇಬೇಕಾದ ವಿಷಯ. ಅದಿರಲಿ, ಇಷ್ಟೆಲ್ಲಾ ಆಗಿಯೂ ಮೂಲ ಸಮಸ್ಯೆಯನ್ನು ಬಗೆಹರಿಸಲಾಯಿತೆ? ಬಹುಶಃ ಉತ್ತರ ತಿಳಿಯದು. ಆದರೆ, ಇದೊಂದು ಪ್ರಶ್ನೆಯನ್ನೇ ವಿಷಯವನ್ನಾಗಿ ತೆಗೆದುಕೊಂಡು ಚರ್ಚಿಸುವುದಾದರೆ ಸ್ವಲ್ಪ ಇತಿಹಾಸದತ್ತ ನೋಡಬೇಕಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ, ಹಿಂದೆ ದಕ್ಷಿಣ ಭಾರತ ಚಿತ್ರರಂಗದ ಬಹುತೇಕ ಎಲ್ಲಾ ಚಟವಟಿಕೆಗಳೂ ಮದರಾಸಿನಲ್ಲೇ ಕೇಂದ್ರಿಕೃತವಾಗಿದ್ದವು. ಇದೇ ಕಾರಣಗಳಿಂದಾಗಿ ತಮಿಳು ಚಿತ್ರರಂಗ ದಕ್ಷಿಣ ಭಾರತದ ಬಹು ದೊಡ್ಡ ಉದ್ದಿಮೆಯಾಗಿ ಬೆಳೆಯಲು ಸಾಧ್ಯವಾಯಿತು. ಅಲ್ಲಿ ಕಲಾವಿದರು, ತಂತ್ರಜ್ಞರು, ಸಹಾಯಕರು ಹೀಗೆ ಚಿತ್ರರಂಗದ ಎಲ್ಲಾ ವರ್ಗದ ಜನರನ್ನು ಹೆಚ್ಚು ಹೆಚ್ಚು ಸೃಷಿಸಲು ಅದು ನೆರವಾಯಿತು. ಕೊನೆಗೆ ಇದು ಅದೆಷ್ಟು ಬೃಹದಾಕಾರವಾಗಿ ಬೆಳೆದುಕೊಂಡಿತೆಂದರೆ, ಕರ್ನಾಟಕವೂ ಸೇರಿದಂತೆ ಇತರ ರಾಜ್ಯಗಳ ಚಲನಚಿತ್ರೋದ್ಯಮ ಸಹಜವಾಗಿ ಮದರಾಸನ್ನೇ ಅವಲಂಬಿಸಬೇಕಾಯಿತು. ಸಣ್ಣ ಸಣ್ಣ ಕಲಾವಿದರು ವಲಸೆ ಹೋಗಲು ಆರಂಭಿಸಿದರು. ಇತರ ರಾಜ್ಯದ ಪ್ರಮುಖ ಕಲಾವಿದರೂ ಅಲ್ಲೇ ನೆಲೆಯೂರಲು ಪ್ರಾರಂಭಿಸಿದರು. ಮದರಾಸು ಚಲನಚಿತ್ರ ಕ್ಷೇತ್ರದ ತವರಾಯಿತು. ಅವಕಾಶಗಳ ಅಚ್ಚುಮೆಚ್ಚಿನ ಊರಾಯಿತು.

ಇದಿಷ್ಟಕ್ಕೆ ಅದು ನಿಲ್ಲಲಿಲ್ಲ. ಹೆಚ್ಚು ಹೆಚ್ಚು ಚಿತ್ರ ತಯಾರಿಕೆ ಅಲ್ಲಿ ನಿರಂತರವಾಗಿ ನಡೆಯತೊಡಗಿತು. ಇದೊಂದು ಉದ್ದಿಮೆಯೆಂದು ಗುರಿತಿಸಿಕೊಂಡ ನಿರ್ಮಾಪಕರು ಹೊರ ರಾಜ್ಯದ ಜನ ಅಚ್ಚರಿ ಪಡುವಷ್ಟರ ಮಟ್ಟಿಗೆ ಹಣ ಹೂಡಲು ಮುಂದಾದರು. ಆಗಷ್ಟೇ ನೆಲೆಯೂರಲು ಹೆಣಗಾಡುತ್ತಿದ್ದ ಕನ್ನಡ ಹಾಗೂ ತೆಲಗು ಚಿತ್ರೋದ್ಯಮ ಈ ನಿಟ್ಟಿನಲ್ಲಿ ಪೈಪೋಟಿ ನೀಡುವಲ್ಲಿ ವಿಫಲವಾದವು. ಮಲಯಾಳೀ ಚಿತ್ರೋದ್ಯಮ ಮಾತ್ರ ಈ ಬೆಳವಣಿಗೆಯಿಂದ ಅಷ್ಟೊಂದು ವಿಚಲಿತವಾಗಲಿಲ್ಲ. ತನ್ನದೇ ಆದ ಉತ್ತಮ ಚಿತ್ರಗಳನ್ನು ಕೊಡುವಲ್ಲಿ ಅದು ತನ್ನನ್ನು ತಾನು ತೊಡಗಿಸಿಕೊಂಡಿತೇ ವಿನಃ ಇದನ್ನೆಲ್ಲಾ ವ್ಯಾವಾಹಾರಿಕವಾಗಿ ಸವಾಲೆಂದು ಸ್ವೀಕರಿಸಲಿಲ್ಲ. ಇಂದಿಗೂ ಅದು ಹೆಚ್ಚು ಕಡಿಮೆ ಅದೇ ಹೆಜ್ಜೆಯನ್ನೇ ಅನುಸರಿಸುತ್ತಿದೆ. ಆದರೆ, ಕನ್ನಡ ಹಾಗೂ ತೆಲುಗು ಚಿತ್ರೋದ್ಯಮ ಮಾತ್ರ ತಮಿಳಿನ ಏಳಿಗೆ ನೋಡಿ, ನಾವೂ ಎತ್ತರಕ್ಕೆ ಬೆಳೆಯಬೇಕು ಎಂದು ಹಂಬಲಿಸಿದವು. ಸಹಜವಾಗಿಯೇ, ತಮ್ಮ ತಮ್ಮ ಭಾಷೆಯಲ್ಲೇ ಒಳ್ಳೊಳ್ಳೇ ಚಿತ್ರಗಳನ್ನು ಇನ್ನೂ ಚೆನ್ನಾಗಿ ಮಾಡಬಲ್ಲೆವೆಂಬುದನ್ನು ತೋರಿಸಲು ಮುಂದಾದವು ಹಾಗೂ ಈ ನಿಟ್ಟಿನಲ್ಲಿ ಯಶಸ್ವಿಯೂ ಆದವು. ಅದರಲ್ಲೂ ಕನ್ನಡ ಚಿತ್ರರಂಗ ಎಪ್ಪತ್ತರ ದಶಕದಲ್ಲಿ ಇಡೀ ದೇಶವೇ ತನ್ನತ್ತ ನಿಬ್ಬೆರಗಾಗಿ ನೋಡುವ ಹಾಗೆ ಒಂದರಿಂದೊಂದರಂತೆ ಚಿತ್ರ ನಿರ್ಮಾಣ ಮಾಡತೊಡಗಿತು. ಒಂದು ಹಂತದಲ್ಲಿ ಹೊರ ರಾಜ್ಯದ ಕಲಾವಿದರು, ನಿರ್ಮಾಪಕ-ನಿರ್ದೇಶಕರು ಕನ್ನಡ ಚಿತ್ರರಂಗದ ಜೊತೆ ಗುರುತಿಸಿಕೊಂಡು ಹೆಮ್ಮೆ ಪಡುತ್ತಿದ್ದರು. ಅದೇ ಸಮಯದಲ್ಲಿ, ಕನ್ನಡ ಸಾಹಿತ್ಯ ಕ್ಷೇತ್ರದ ಸಾಧನೆ ಕೂಡ ಅತೀ ಎತ್ತರದಲ್ಲಿತ್ತು. ಜೊತೆಗೆ ಅದೂ ಚಿತ್ರರಂಗದ ಯಶಸ್ಸಿಗೆ ಕೆಲಮಟ್ಟಿಗೆ ಬೆನ್ನೆಲುಬಾಗಿ ನಿಂತಿತು. ಒಟ್ಟಾರೆ ಕನ್ನಡ, ಬಂಗಾಳಿ, ಮಲೆಯಾಳೀ ಚಿತ್ರಗಳ ಮೇಲೆ ಇಡೀ ದೇಶದ ವ್ಯಾಮೋಹ ತೀವ್ರವಾಗತೊಡಗಿತು. ಕೆಲಕಾಲ ಇದನ್ನು ಉಳಿಸಿಕೊಂಡು ತನ್ನ ಘನತೆಯನ್ನು ಕನ್ನಡ ಚಿತ್ರರಂಗವೂ ಕಾಪಾಡಿಕೊಂಡಿತು. ಅತ್ತ ತೆಲುಗಿನಲ್ಲೂ ಪರ್ಯಾಯವಾಗಿ ಕಲಾವಿದರು, ಪ್ರತಿಭಾವಂತ ನಿರ್ದೇಶಕರೂ ಬೆಳೆಯಲಾರಂಭಿಸಿದರು.

ಇಲ್ಲಿಯವರೆಗೂ ಎಲ್ಲಾ ಸರಿಯಾಗಿಯೇ ಇತ್ತು. ಕನ್ನಡ, ತಮಿಳು, ತೆಲುಗು ಎಂಬ ಯಾವುದೇ ಬೇಧವಿಲ್ಲದೆ ಅಲ್ಲಿನ ಚಿತ್ರಗಳು ಕನ್ನಡಕ್ಕೂ, ಕನ್ನಡ ಚಿತ್ರಗಳು ಅಲ್ಲಿಗೂ ಬಂದು ಹೋಗಲಾರಂಭಿಸಿದವು. ಇದು ಪ್ರೇಕ್ಷಕನಿಗೂ ಹಿತವಾಗ ತೊಡಗಿತು. ತೆಲುಗಿನ “ಮಾಯಾಬಜಾರ್” ಮೋಡಿಯನ್ನು ಕನ್ನಡದಲ್ಲಿ ಮಾಡಲಾಗದಿದ್ದರೂ ಅದನ್ನು ಕನ್ನಡದಲ್ಲೇ ನೋಡಿ ಆನಂದಿಸುವಂತಾದರು. ಅಲ್ಲಿನವರು ಅಲ್ಲಿ, ಇಲ್ಲಿನವರು ಇಲ್ಲಿ ತಮ್ಮ ತಮ್ಮ ಭಾಷೆಯಲ್ಲೇ ಎಲ್ಲಾ ಚಿತ್ರಗಳನ್ನು ನೋಡುವಂತಾದಾಗ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಯಾಕೋ ಇದ್ದಕ್ಕಿದ್ದಂತೆ ಡಬ್ಬಿಂಗ್ ನಿಷೇಧ ಕಾಯಿದೆಯನ್ನು ಕನ್ನಡದಲ್ಲಿ ಬಲಂತವಾಗಿ ಹೇರಲಾಯಿತು. ಇದಕ್ಕೆ ಕೊಡುವ ಕಾರಣಗಳನ್ನು ಕನ್ನಡಿಗರು ಅಷ್ಟೊಂದು ಸುಲಭವಾಗಿ ಒಪ್ಪಿಕೊಳ್ಳಗಾಗುವುದಿಲ್ಲ ಹಾಗು ಶಾಶ್ವತವಾಗಿ ಒಪ್ಪಿಕೊಳ್ಳುವುದೂ ಸಾಧ್ಯವಿಲ್ಲ. ಏಕೆಂದರೆ, ಈ ನಿಷೇಧದಿಂದ ಕನ್ನಡ ಚಿತ್ರ ರಸಿಕರಿಗೆ ಹಾಗೂ ಕನ್ನಡ ಭಾಷೆಗೆ ಲಾಭಕ್ಕಿಂತ ಅಪಾರ ನಷ್ಟವೇ ಆಗಿದೆ ಹಾಗೂ ಆಗುತ್ತಿದೆ. ನಿಷೇಧವನ್ನು ಬೆಂಬಲಿಸಿದರು ಕೆಲವು ಜನಗಳ ವೈಯುಕ್ತಿಕ ಹಿತಾಸಕ್ತಿಯನ್ನೇ ಪ್ರಮುಖವಾಗಿರಿಸಿಕೊಂಡರು. ಕಾರ್ಮಿಕ ವರ್ಗ ಡಬ್ಬಿಂಗ್ ಬಂದಲ್ಲಿ ಬೀದಿಪಾಲಾಗುತ್ತಾರೆಂಬ ಅವೈಜ್ಞಾನಿಕ ವಿಚಾರವನ್ನು ಮುಂತಂದರೆ ಹೊರತು, ಭಾಷೆಗೆ ಆಗಬಹುದಾದ ನಷ್ಟವನ್ನು ಮುಂದಾಲೋಚಿಸದಾದರು. “ನಾವು ಕನ್ನಡದಲ್ಲೇ ಸಿನಿಮಾ ಕೊಡುತ್ತೇವೆ” ಎಂದವರಿಗೆ, “ಇಲ್ಲಾ ನಮಗೆ ನಿಮ್ಮ ಭಾಷೆಯಲ್ಲೇ ಕೊಡಿ, ಕನ್ನಡಕ್ಕೆ ಮಾರಕವಾಗುವಂಥ ಡಬ್ಬಿಂಗ್ ಬೇಡವೇ ಬೇಡ” ಎಂಬ ವಾದವನ್ನು ಮುಂದಿಟ್ಟು, ಕನ್ನಡನಾಡಿನಲ್ಲಿ ಕನ್ನಡದಲ್ಲೇ ನೋಡಬಹುದಾದುದ್ದನೆಲ್ಲಾ ಅನ್ಯ ಭಾಷೆಗಳಲ್ಲಿ ನೋಡುವಂತೆ ಮಾಡಿದರು. ಕೆಲವು ವರ್ಷಗಳ ಕಾಲ ಈ ನಿಷೇಧ ಯಶಸ್ವಿಯಾಗಿತ್ತು ಎಂದೆನಿಸಿದರೂ, ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ಗುಪ್ತವಾಗಿತ್ತು. ಪ್ರೇಕ್ಷಕನಿಗೂ ಕೂಡ ಉತ್ತಮ ಕನ್ನಡ ಚಿತ್ರಗಳು ಬರುವವರೆಗೂ ನಿಷೇಧದಿಂದ ನಷ್ಟವೇನೂ ಆಗಿರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಕನ್ನಡ ಸಿನಿಮಾ ಗುಣಮಟ್ಟ ಹೀನಾಯ ಸ್ಥಿತಿ ತಲುಪುತ್ತಿರುವುದನ್ನು ಗಮನಿಸಿದ ಪ್ರೇಕ್ಷಕನಿಗೆ ಸಹನೆ ಕಟ್ಟೆ ಹೊಡೆಯಿತು.  ಅನ್ಯ ಭಾಷೆಯ ಒಳೊಳ್ಳೇ ಚಿತ್ರಗಳನ್ನು ಕಂಡಾಗ ನಿಧಾನವಾಗಿ ಕನ್ನಡದಿಂದ ಮುಖ ತಿರುಗಿಸಿದ. ಭಾಷೆ ಅರ್ಥವಾಗದಿದ್ದಾಗ ಅದನ್ನು ಕಲಿತು ನೋಡಲೂ ಮುಂದಾದ. ಇದರಿಂದ ಕನ್ನಡ ಪ್ರೇಕ್ಷಕನನ್ನು ಕನ್ನಡ ಚಿತ್ರೋದ್ಯಮವೇ ಕಳೆದುಕೊಂಡಿತು.

ಇಷ್ಟೆಲ್ಲಾ ಆದರೂ ಅರಿತು ಎಚ್ಚೆತ್ತುಕೊಳ್ಳದ ಕನ್ನಡ ಚಿತ್ರೋದ್ಯಮದ ಮಂದಿ, ನಿಷೇಧವನ್ನು ಇಂದಿನವರೆಗೂ ಕಟ್ಟು ನಿಟ್ಟಾಗಿ ಪಾಲಿಸಿದರೇ ಹೊರತು, ಕರ್ನಾಟಕದಲ್ಲಿ ಕನ್ನಡ ಚಲನ ಚಿತ್ರ ಸಾಮ್ರಾಜ್ಯ ಕಟ್ಟಲಿಲ್ಲ. ಕಟ್ಟಲು ಮುಂದಾದವರ ಬೆನ್ನನ್ನೂ ತಟ್ಟಲಿಲ್ಲ. ಸಾವಿರಾರು ಕಾರ್ಮಿಕರಿಗೆ ಅನ್ನಕ್ಕೆ ದಾರಿಯಾಗಬಹುದಾದ ಚಿತ್ರನಗರಿ ಅವರಿಗೆ ಬೇಡವಾಗಿತ್ತೇ ಹೊರತು ಕಾರ್ಮಿಕರಿಗೆ ಅನ್ಯಾಯವಾಗಬಹುದೆಂಬ ಡಬ್ಬಿಂಗ್ ನಿಷೇಧ ಮಾತ್ರ ಬೇಕಾಗಿತ್ತು. ಇವರಿಗೆ ವಿರುದ್ಧವೆಂಬಂತೆ, ಅತ್ತ ತಮಿಳು ಹಾಗೂ ತೆಲುಗು ಚಿತ್ರೋದ್ಯಮದ ಗಣ್ಯರು ತಮ್ಮ ತಮ್ಮ ರಾಜ್ಯದಲ್ಲೇ ಚಿತ್ರ ತಯಾರಿಕಾ ಘಟಕಗಳನ್ನು ಸ್ಥಾಪಿಸಿಕೊಂಡರು. ಚಿತ್ರರಂಗದ ಏಳಿಗೆಗೆ ಬೆಂಗಾವಲಾದರು. ನಮ್ಮವರು ಮತ್ತೆ ಅವರನ್ನೇ ಅವಲಂಭಿಸಿಕೊಳ್ಳುವ ಹೇಡಿತನ ತೋರಿದರೇ ಹೊರತು ಭಾಷೆಯ ಉಳಿವಿನ ಕಡೆ ಗಮನ ಹರಿಸಲಿಲ್ಲ. ಬದಲಿಗೆ, ಶ್ರೀಮಂತ ಭಾಷೆಯಾದ ಕನ್ನಡವನ್ನು ಚಿತ್ರೋದ್ಯಮಕ್ಕಷ್ಟೇ ಸೀಮಿತಗೊಳಿಸುವ ಅಲ್ಪತನ ತೋರಿ ಕನ್ನಡ ಎಂದರೆ ಬರೀ ಕನ್ನಡ ಚಲನಚಿತ್ರರಂಗ ಎಂಬ ವಿಷವನ್ನು ಕನ್ನಡಿಗರಿಗೆ ಉಣಿಸಲಾರಂಭಿಸಿದರು. ಸಾಲದೆಂಬಂತೆ, ಪರಭಾಷೆಗಳ ವಿರುದ್ಧವಾಗಿ ಬೊಬ್ಬೆಹೊಡೆಯಲು ಸಮಯ ವ್ಯರ್ಥಮಾಡಿದರೇ ಹೊರತು, ಸವಾಲೆನಿಸುವಂಥಹ ಚಿತ್ರಗಳನ್ನು ಕೊಡುವಲ್ಲಿ ವಿಫಲರಾದರು. ಕೊನೆಗೆ ಕೈಲಾಗದಿದ್ದಾಗ ತಾವೇ ಪರಭಾಷಾ ಚಿತ್ರಗಳನ್ನು ವಿತರಿಸುವಲ್ಲಿ, ರೀಮೇಕು ಮಾಡುವಲ್ಲಿ ತೊಡಗಿಸಿಕೊಂಡರು. ತಾವು ಮಾಡಿದ್ದೇ ಸರಿ, ನಾವು ಕೊಟ್ಟಿದ್ದೇ ಒಳ್ಳೆಯ ಸಿನಿಮಾ ಎಂದು ನಂಬಿಸುವ ಮೂರ್ಖತನವನ್ನು ಇಂದಿನ ಕಂಪ್ಯೂಟರ್ ಯುಗದಲ್ಲಿ ಪ್ರದರ್ಶಿಸಿದರು. ಇವೆಲ್ಲದರ ಪರಿಮಾಮವಾಗಿ ಇಂದಿಗೂ ಬರುತ್ತಿರುವ ಒಂದಷ್ಟು ಚೆಂದದ ಸಿನಿಮಾಗಳು ಪ್ರೇಕ್ಷಕನನ್ನು ತಲುಪುವಲ್ಲಿ ಸೋಲುತ್ತಿವೆ. ಚಿತ್ರಮಂದಿರದಲ್ಲಿ ನಿಲ್ಲಲ್ಲು ಹೆಣಗಾಡುತ್ತಿವೆ. ಕನ್ನಡ ಚಿತ್ರರಂಗದ ಈ ಅಧೋಗತಿಗೆ ಕನ್ನಡ ಸಾಹಿತ್ಯ ಜಗತ್ತಾಗಲೀ, ಕರ್ನಾಟಕ ಸರ್ಕಾರವಾಗಲೀ ಅಥವಾ ಕನ್ನಡ ಪ್ರೇಕ್ಷಕನಾಗಲೀ ಕಾರಣನಲ್ಲ ಆದರೂ, ಇದನ್ನು ಚಿತ್ರೋದ್ಯಮದ ಮಂದಿ ಇಂದಿಗೂ ಅರಿಯುತ್ತಿಲ್ಲ.

ವೈಯುಕ್ತಿಕವಾಗಿ ನಾನೂ ಕೂಡ ೧೯೯೯ ರಿಂದಾಚೆಗೆ ಬಂದ ಯಾವ ಕನ್ನಡ ಸಿನಿಮಾವನ್ನೂ ನೋಡಿಲ್ಲ. ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಂತೂ ಇಲ್ಲವೇ ಇಲ್ಲ. ನೋಡ ಬೇಕೆನಿಸಲೂ ಇಲ್ಲ. ಕೆಲವು ಇಂಗ್ಲೀಷ್ ಸಿನಿಮಾಗಳನ್ನು ನೋಡಿದ್ದೇನೆ. ಆನಂದಿಸಿದ್ದೇನೆ. ಅವರ ಶ್ರದ್ಧೆ, ನಟನೆ, ನಿರ್ದೇಶನಕ್ಕೆ ಬೆರಗಾಗಿದ್ದೇನೆ. ಆದರೆ, ಇಂದಿಗೂ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಪ್ರತಿಯೊಂದು ಒಳ್ಳೆಯ ಸಿನಿಮಾ ನೋಡಿದಾಗಲೂ ನೋಯುತ್ತದೆ. ನಮ್ಮಲ್ಲೂ ಇಂಥಹ ಸಿನಿಮಾಗಳು ಭವಿಷ್ಯದಲ್ಲಿ ಬರಬಹುದೇ, ಕನ್ನಡದಲ್ಲೇ ವಿಶ್ವ ಶ್ರೇಷ್ಟ ಚಿತ್ರಗಳನ್ನು ನಿರೀಕ್ಷಿಸಬಹುದೇ, “ಚೋಮನ ದುಡಿ”, “ಬಂಗಾರದ ಮನುಷ್ಯ”, “ಬೂತಯ್ಯನ ಮಗ ಅಯ್ಯು”, “ಸಂಸ್ಕಾರ” ಗಳನ್ನು ಕೊಟ್ಟಿರುವ ನಮಗೆ ಇಂಥ ಸಿನಿಮಾಗಳನ್ನು ಕೊಡುವುದು ಕಷ್ಟವೇ? ಅನ್ನಿಸುತ್ತದೆ. ಜೊತೆಗೆ ಡಬ್ಬಿಂಗ್ ನಿಷೇಧವೆಂಬ ಪೂರ್ವಾಗ್ರಹ ಪೀಡಿತ ಮನೋಭಾವನೆಯಿಂದ ಹೊರಬರುವ ಹೃದಯ ವೈಶಾಲತೆಯನ್ನು ಕನ್ನಡ ಚಿತ್ರೋದ್ಯಮದ ಗಣ್ಯರಿಗೆಲ್ಲಾ ಬೆಳೆಸಿಕೊಳ್ಳಬೇಕಾಗಿದೆ. ಒಂದು ವೇಳೆ “ಲಾರ್ಡ್ ಆಫ್ ದಿ ರಿಂಗ್ಸ್” ಅಥವಾ “ಟ್ರಾಯ್” ನಂತಹ ಇಂಗ್ಲೀಷ್ ಚಿತ್ರಗಳನ್ನು ಕನ್ನಡದಲ್ಲಿ ನೋಡುವ ಅವಕಾಶವಿದ್ದಿದ್ದರೆ ಬಹುಶಃ ಕನ್ನಡ ಪ್ರೇಕ್ಷಕನಿಗೆ “ಬಾಹುಬಲಿ” ರುಚಿಸುತ್ತಿರಲಿಲ್ಲವೇನೋ ಎನ್ನಿಸುತ್ತದೆ. ಹಾಗೆಯೇ, ನಮ್ಮ ಕನ್ನಡದ ಮಕ್ಕಳಿಗೂ “ಫೈಂಡಿಗ್ ನೀಮೋ”, “ಸ್ಟಾರ್ ವಾರ್ಸ್”, “ಹ್ಯಾರಿ ಪಾಟ್ಟರ್”, “ಜುರಾಸಿಕ್ ಪಾರ್ಕ್” “ಫ್ರೋಜನ್” “ಕಾರ್ಸ್” “ಟಾಯ್ಸ್ ಸ್ಟೋರೀ” ಗಳನ್ನು ಕನ್ನಡದಲ್ಲಿ ತೋರಿಸಬಹುದಿತ್ತು , ಅವರ ಕ್ರಿಯಾತ್ಮಕ ಬೆಳವಣಿಗೆಗೆ ವಿಶಾಲವಾದ ವಾತಾವರಣ ಸೃಷ್ಟಿಸಬಹುದಿತ್ತು ಅನ್ನಿಸುತ್ತದೆ.

೨೭-೦೭-೨೦೧೫

You may also like...

Leave a Reply