ಪ್ರಶ್ನೆಗಳು
ನಾ ನಿನ್ನ
ಕೇಳಬೇಕೆಂದುಕೊಳ್ಳುತ್ತಿದ್ದೆ
ಅದೇಕೆ ಹಾಗೆ,
ನೋಡಿ ನಕ್ಕಿದೆ?
ನಾ ಬಹುದಿನಗಳಿಂದಲೂ
ಬೆಳೆಸಿ, ಪೋಷಿಸಿದ
ಎಳೆಯ ಭಾವನೆಗಳು
ನಿನಗೆ ಅಪಹಾಸ್ಯವೆ?
ಮಳೆಯ ಬಿಲ್ಲಿನೊಳು
ಎದೆಯ ತುಂಬಿರಲು
ಬಗೆ ಬಗೆಯ ಕನಸುಗಳವು
ನಿನಗೆ ಲಘುವಾದವೆ?
ಚೆಲುವ ಕಾಂತಿಯನು
ಒಲವ ಪ್ರಣತಿಯಲಿಟ್ಟು
ಪೂಜೆ ಮಾಡಿದ ಪರಿಯು
ನಿನಗೆ ಅವಮಾನವೆ?
ನಗೆಹೂವ ರಾಶಿಯನು
ಮೊಗಹೊತ್ತ ರೀತಿಯನು
ಕಂಡು ಮೋಹಿಸಿದ್ದೊಂದು
ನಿನಗೆ ಅಪರಾಧವೆ?
ನೀ ಬಹುಶಃ ನಾನಾಗಿ
ನನ್ನಂತೆ ನಿನಗಾಗಿ
ಪರಿತಪಿಸಿ ಪರದಾಡಿದರೆ
ನಿನಗೆ ಅನುಕೂಲವೆ?