ಭಕ್ತ ಕುಂಬಾರನನ್ನಾಗಿ ರಾಜಣ್ಣನನ್ನು ನೋಡುವುದತಿ ಚೆಂದ!
ಕನ್ನಡ ಚಿತ್ರಜಗತ್ತಿನ ಮರೆಯಲಾಗದ ಚಿತ್ರರತ್ನಗಳನ್ನು ಪಟ್ಟಿಮಾಡಬಹುದಾದರೆ, ಅದರಲ್ಲಿ ಅತಿ ಮುಖ್ಯವಾಗಿ “ಭಕ್ತ-ಕುಂಬಾರ”ವೂ ಒಂದು. “ಭಕ್ತ-ಕುಂಬಾರ” ಚಿತ್ರ ಹಲವಾರು ಕಾರಣಗಳಿಂದ ನನಗೆ ಇಷ್ಟವಾಗುತ್ತಾ ಹೋಗುತ್ತದೆ. ಪ್ರಮುಖವಾಗಿ ಚಿತ್ರದ ಕಥಾವಸ್ತು ಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ಸರಳಾತೀಸರಳವಾಗಿರುವುದು. ನಿರೂಪಣೆಯ ಶೈಲಿ ಮಗುವಿಗೂ ಅರ್ಥವಾಗುವಷ್ಟು ಸುಲಲಿತವಾಗಿರುವುದು. ಜೊತೆಗೆ “ಹುಣಸೂರು ಕೃಷ್ಣಮೂರ್ತಿ” ಯವರಂಥ ಪ್ರತಿಭಾವಂತರು ಈ ಅತ್ಯದ್ಭುತ ಚಿತ್ರವನ್ನು ನಿರ್ದೇಶನ ಮಾಡಿರುವುದು, ಇಂದಿಗೂ, ಮುಂದೆಯೂ, ಕನ್ನಡ ಚಿತ್ರರಂಗದ ಕೊನೆಯುಸಿರಿರುವವರೆಗೂ ಮರೆಯಾಗದಂಥಹ ಸಾಹಿತ್ಯ, ಸಂಗೀತದ ಜುಗಲ್‍ಬಂದಿಯನ್ನು ಈ ಚಿತ್ರಕ್ಕೆ ಅಳವಡಿಸಿರುವುದು. ಹೀಗೇ ಬೆಳೆಯುತ್ತಾ ಹೋಗುತ್ತದೆ ಈ ಚಿತ್ರದಲ್ಲಿರುವೆಲ್ಲಾ ಪ್ರಮುಖಾಂಶಗಳನ್ನು ಬರೆಯುತ್ತಾ ಹೋದರೆ…
ಇವನ್ನೆಲ್ಲಾ ಹೊರತಾಗಿಯೂ “ಭಕ್ತ-ಕುಂಬಾರ” ಚಿತ್ರವನ್ನು ಇಂದಿಗೂ ಶ್ರೇಷ್ಟಚಿತ್ರಗಳ ಸಾಲಿನಲ್ಲಿ ಸೇರಿಸಲು ಅಣ್ಣಾವ್ರ ಅಮೋಘಭಿನಯವೊಂದೇ ಸಾಕು. ಪೂರ್ತಿ ಚಿತ್ರವನ್ನೇ “ಮ್ಯೂಟ್” ಮಾಡಿ ನೋಡಿದರೂ, ಇಡೀ ಚಿತ್ರದ ಸಾರಾಂಶವೆಲ್ಲಾ ಅರ್ಥವಾಗುವಷ್ಟು ಪರಿಣಾಮಕಾರಿಯಾಗಿದೆ ಅವರ ಅಭಿನಯ. ಅಂಥಹ ನಟನಾಚಾತುರ್ಯಶಕ್ತಿ ವಿಶ್ವದ ಯಾವುದೇ ನಟನೊಬ್ಬನಿಗೂ ಇಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. “ದಿ ಗಾಡ್ ಫಾದರ್” ನಂಥಹ ಚಿತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಳ್ಳುವಷ್ಟು ಸಾಮರ್ಥ್ಯ ಅಣ್ಣಾವ್ರಿಗಿದೆ. “ಮಾರ್ಲೋನ್ ಬ್ರಾಂಡ್” ನಷ್ಟೇ ಪರಿಣಾಮಕಾರಿಯಾಗಿ ನಟಿಸಿ ತೋರಿಸುವ ಶಕ್ತಿಯು ಅವರಿಗಿದೆ. ಆದರೆ, ವಿಶ್ವದ ಯಾವುದೇ ಒಬ್ಬ ನಟನಿಗೂ “ಮಯೂರ” “ಬಭ್ರುವಾಹನ” “ಭಕ್ತ ಕುಂಬಾರ” “ಸತ್ಯ ಹರಿಶ್ಚಂದ್ರ” ರನ್ನು ತೆರೆಯ ಮೇಲೆ ನಟಿಸಿ ತೋರಿಸುವುದು ಸಾಮಾನ್ಯವಾದ ಮಾತೆನಲ್ಲ. ಈ ಕಾರಣದಿಂದಲೇ ಅವರೊಬ್ಬ ವಿಶ್ವಶ್ರೇಷ್ಟ ನಟ ಎಂಬುದು ನಿರ್ವಿವಾದ. ತಮ್ಮ ಭಾಷಾಪ್ರೇಮದಿಂದ ಕರ್ನಾಟಕ, ಕನ್ನಡಕ್ಕಷ್ಟೇ ತಮ್ಮನ್ನು ತಾವು ಸೀಮಿತ ಮಾಡಿಕೊಂಡ ಕಾರಣದಿಂದಾಗಿ ಅವರಿಗೆ ವಿಶ್ವ ಮಟ್ಟದಲ್ಲಿ ಸಿಗಬಹುದಾಗಿದ್ದ ಪ್ರಚಾರವಾಗಲೀ, ಹೆಸರಾಗಲೀ ಸಿಗಲಿಲ್ಲ. ಅದೊಂದೇ ಕಾರಣದಿಂದ ಅವರೊಬ್ಬ ವಿಶ್ವಶ್ರೇಷ್ಟ ನಟ ಎಂಬುದನ್ನು ಸುಳ್ಳುಮಾಡಲಾಗುವುದಿಲ್ಲ. ನನಗೆ “ನಮ್ಮ ಕನ್ನಡದ ಹೆಮ್ಮೆ ಅವರು” ಎಂದು ಹೇಳಿಕೊಳ್ಳುವಾಗ ಅತ್ಯಾನಂದವಾಗುತ್ತದೆ. ಅಣ್ಣಾವ್ರು ಕೇವಲ ನಟರಾಗಿಯಷ್ಟೇ ಅಲ್ಲ, ಒಬ್ಬ ಸಾಮಾನ್ಯ ಮನುಷ್ಯರಾಗಿಯೂ ಜನರಿಗೆ ಆದರ್ಶವಾಗುತ್ತಾರೆ. ಕನ್ನಡ ಚಿತ್ರಕಥಾವಸ್ತುಗಳ ಆಯ್ಕೆಯಲ್ಲಿ ಅವರು ತೋರಿಸುತ್ತಿದ್ದ ಕಾಳಜಿ ಅವರ ಚಿತ್ರಗಳನ್ನು ನೋಡುವವರಿಗೆಲ್ಲಾ ತಿಳಿಯುತ್ತದೆ. ಆದುದರಿಂದಲೇ, ಅಣ್ಣಾವ್ರ ಚಿತ್ರಗಳು ಜನಸಾಮಾನ್ಯನ ನಿಜಜೀವನಕ್ಕೆ ಅಷ್ಟೊಂದು ಹತ್ತಿರವಾಗುತ್ತಾ ಹೋಗುತ್ತವೆ. ಬರೀ ಸಿನಿಮಾ ಎನ್ನುವ ಮಾತು ಅವರ ಚಿತ್ರಗಳಿಗೆ ಎಂದಿಗೂ ಅನ್ವಯವಾಗದೆ, ಒಂದು ಸಾಮಾಜಿಕ, ಕೌಟುಂಬಿಕ, ಐತಿಹಾಸಿಕತೆಯ ಪ್ರತಿಬಿಂಬಗಳಾಗಿ ಹೋಗಿವೆ ಬಹುತೇಕ ಚಿತ್ರಗಳು. ತಿಳಿದೋ, ತಿಳಿಯದೆಯೋ ಜನರು ಅವರ ಸಿನಿಮಾಗಳಿಂದ ಪ್ರಭಾವಿತರಾಗಿ ತಮ್ಮಲ್ಲಿ ತಾವೇ ಬದಲಾವಣೆ ತಂದುಕೊಂಡಿರುವ ಪ್ರಸಂಗಗಳನ್ನು ಕೇಳಿದ್ದೇವೆ. ಅಷ್ಟೊಂದು ಪರಿಣಾಮಕಾರಿಯಾದ ಪಾತ್ರಪೋಷಣೆಯನ್ನು ಅವರು ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಇಂಥಹ ಪಾತ್ರಗಳ ಸಾಲಿನಲ್ಲಿ ನನಗೆ ಅವರ ಅನೇಕ ಚಿತ್ರಗಳು ಎಂದಿಗೂ ಇಷ್ಟವಾಗುತ್ತವೆ. ಆ ಪಟ್ಟಿಯಲ್ಲಿ ಭಕ್ತ-ಕುಂಬಾರವೂ ಒಂದು.
ಈ ಸಿನಿಮಾದಲ್ಲಿ ನನ್ನನ್ನು ಆಕರ್ಷಿಸಿದ ಪ್ರಮುಖ ಅಂಶಗಳಲ್ಲಿ ಮೊದಲನೆಯದಾಗಿ ಅಣ್ಣಾವ್ರ ಅಭಿನಯ ನಂತರ ಚಿತ್ರದ ಸಾಹಿತ್ಯ ಹಾಗೂ ಸಂಗೀತ. ನಿರ್ದೇಶಕನಿಗೆ ತನ್ನ ಸಿನಿಮಾದ ಬಗ್ಗೆ ಅನೇಕಾನೇಕ ಕಲ್ಪನೆಗಳಿರುತ್ತವೆ. ಆ ಕಲ್ಪನೆಗಳನ್ನು ಹಾಡಿನಲ್ಲೋ, ಸಾಹಿತ್ಯದಲ್ಲೋ ಬರೆದು ಪರಿಣಾಮಕಾರಿಯಾಗಿ ತೋರಿಸಬಹುದು ಆದರೆ, ಆ ಕೆಲಸ ಕಷ್ಟವಾಗುವುದು ನಟನಾ ಚೌಕಟ್ಟಿನೊಳಕ್ಕೆ ಬಂದಾಗ. ಏಕೆಂದರೆ, ಬರೆಯುವಾಗ ಲೇಖಕನಿಗಿರುವ ಸ್ವಾತಂತ್ರ್ಯ, ನಟನೊಬ್ಬನಿಂದ ಮಾಡಿಸಿ ತೋರಿಸುವಾಗ ಇರುವುದಿಲ್ಲ. ಇಲ್ಲಿ ಕರ್ತೃವೇ ಬೇರೆ, ಪಾತ್ರ ಮಾಡುವವನೇ ಬೇರೆ. ನಿರ್ದೇಶಕನ ಬಹು ಪ್ರಯತ್ನದ ನಂತರವೂ, ಅಸಮರ್ಥ ನಟನಾದರೆ ಆ ಚಿತ್ರ ಮೂಡಿ ಬರುವ ರೀತಿಯೇ ಬೇರೆಯದ್ದಾಗಿರುತ್ತದೆ. ನಿರ್ದೇಶಕ ಅದೆಷ್ಟೇ ಜಾಣ್ಮೆ, ಶ್ರಮ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, ತೆರೆಯ ಮೇಲೆ ಕಥೆಯನ್ನು ಪರಿಣಾಮಕಾರಿಯಾಗಿ ವೀಕ್ಷಕರಿಗೆ ತಲುಪಿಸುವಲ್ಲಿ ಪಾತ್ರ ವಿಫಲವಾದರೆ, ಆ ನಿರ್ದೇಶಕನ ಶ್ರಮ ವ್ಯರ್ಥವೇ ಸರಿ. ಅಣ್ಣಾವ್ರು ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ನಾಯಕರಾಗಿ ರಾರಾಜಿಸುವುದು ಇಂಥಹ ಕಡೆಗಳಲ್ಲಿ. ಹುಣಸೂರರು ಇಂಥದ್ದೊಂದು ಕಥೆಯನ್ನು ಸಿದ್ಧಪಡಿಸಿದ ನಂತರ ಈ ಪಾತ್ರಕ್ಕೆ ಬೇರೆ ಯಾವುದೇ ಕನ್ನಡದ ನಟನೊಬ್ಬನನ್ನು ಕುಂಬಾರನ ಪಾತ್ರದಲ್ಲಿ ಕಲ್ಪಿಸಿಕೊಂಡಿರಲಿಲ್ಲವೇನೋ ಅನ್ನಿಸುತ್ತದೆ. ಪಾಂಡುರಂಗನ ಪರಮ ಭಕ್ತನಾಗಿ ತೆರೆಯನ್ನೆಲ್ಲಾ ಸಂಪೂರ್ಣವಾಗಿ ಆವರಿಸಿಕೊಳ್ಳುವ ಅಣ್ಣಾವ್ರು, ಚಿತ್ರ ಮುಗಿಯುವವರೆಗೂ ಪಾತ್ರದ ಮೇಲೆ ಅದೇ ಹಿಡಿತ ಸಾಧಿಸುತ್ತಾ ಹೋಗುವುದರಿಂದ, ಪ್ರೇಕ್ಷಕ ಚಿತ್ರಗೊಳಗೆ ಎಲ್ಲೋ ಕಳೆದುಹೋಗುತ್ತಾ, ತನ್ನನ್ನು ತಾನೇ ಮರೆಯುತ್ತಾ ಹೋಗುತ್ತಾನೆ. ಅವನಿಗೆ ಇದೊಂದು ಸಿನಿಮಾ ಎಂದು ಅರಿವಿಗೆ ಬರುವುದು ಚಿತ್ರ ಮುಗಿದ ನಂತರವೇ. ಇಂಥಹ ಚಿತ್ರಗಳು ಯಾವುದೇ ಭಾಷೆಯಲ್ಲೂ ತುಂಬಾ ಅಪರೂಪ. ಆದರೆ ಕನ್ನಡದಲ್ಲಿ ಮಾತ್ರ ಕೊರತೆಯಿಲ್ಲ. ಇದೇ ಕಾರಣಗಳಿಂದ ಕನ್ನಡ ಚಿತ್ರರಸಿಕರು ಅಣ್ಣಾವ್ರಿಗೆ ಕೋಟಿ ಕೋಟಿ “ಥ್ಯಾಂಕ್ಸ್” ಹೇಳಬೇಕು.
ಚಿತ್ರದ “ಶಾಟ್” ಮುಗಿದ ನಂತರವೂ ಅಣ್ಣಾವ್ರು ಮಣ್ಣನ್ನು ಹಾಗೇ ತುಳಿಯುತ್ತಾ ಮೈಮರೆತಿದ್ದಾಗ, ಇಡೀ ಚಿತ್ರ ತಂಡವೇ ಮೂಕ ಪ್ರೇಕಕನಂತೆ ನಿಂತಿತ್ತಂತೆ. ಕೊನೆಗೆ, ನಿರ್ದೇಶಕರು ಅವರನ್ನು ತಡೆದು ನಿಲ್ಲಿಸಬೇಕಾಗಿತ್ತು ಎಂದು ದೊರೈ-ಭಗವಾನ್ ಸಂದರ್ಶನವೊಂದರಲ್ಲಿ ಅಣ್ಣಾವ್ರು ತಮ್ಮನ್ನು ತಾವೇ ಮರೆತು “ಹರಿನಾಮವೇ ಚೆಂದ” ಹಾಡಿನಲ್ಲಿ ಹೇಗೆ ಅಭಿನಯಿಸಿದ್ದರು ಎಂದು ನೆನಪಿಸಿಕೊಳ್ಳುತ್ತಿದ್ದರು. ಆ ತನ್ಮಯತೆಯನ್ನು ಚಿತ್ರದುದ್ದಕ್ಕೂ ನಾವೂ ಗಮನಿಸುತ್ತೇವೆ. ನಾಲ್ಕು ಮಾತುಗಳಲ್ಲಿ ಹೇಳಬೇಕೆಂದರೆ…
ಜಗದೋದ್ಧಾರಕನಾದ ಪಾಂಡುರಂಗನು ಭಕ್ತನಿಗೆ ಸಹಾಯ ಮಾಡಲೋಸುಗವಾಗಿ ತಾನೇ ಕುಂಬಾರನ ಮನೆಗೆ ಮನೆಯಾಳಾಗಿ ಬಂದಿರುತ್ತಾನೆ. ಕುಂಬಾರನಿಗೋ ಆತನೆಂದರೆ ಸಲೀಸು. ಭಗವಂತನ ಈ ಮಾಯಾಲೀಲೆಗಳನ್ನೇನೂ ಅರಿಯದ ಕುಂಬಾರ ಮುಗ್ಧನಾಗಿ ಮನೆಯಾಳಿನ ಜೊತೆ ಮಹದಾನಂದದಿಂದ ಜೀವನ ನಡೆಸುತ್ತಿರುತ್ತಾನೆ. ಆ ಕೆಲಸದಾಳು ತಾನು ಮನೆ ಕೆಲಸ ಮಾಡುವುದರ ಜೊತೆಗೆ, ಕುಂಬಾರನ ಸೇವೆಯನ್ನೂ ಮಾಡುತ್ತಾನೆ. ಕುಂಬಾರನಿಗೆ ಮುಜುಗರವಾದರೂ ಆತನ ಒತ್ತಾಯದಿಂದ ತನ್ನ ಕಾಲುಗಳನ್ನೂ ಒತ್ತಿಸಿಕೊಳ್ಳುತ್ತಾನೆ.
ನಂತರ ಈತನೇ ಪಾಂಡುರಂಗ ಎಂಬ ಸತ್ಯ ಕುಂಬಾರನಿಗೆ ತಿಳಿಯುತ್ತದೆ. ಕುಂಬಾರನನ್ನು ಕಣ್ತುಂಬಿಕೊಂಡು ಅದುವರೆಗೂ ಮೈಮರೆತಿದ್ದ ಪ್ರೇಕ್ಷಕನ ಮೈಯಲ್ಲಿ ಇದ್ದಕ್ಕಿದ್ದಂತೆ ಬರೋಬ್ಬರಿ ನೂರು “ಮೆಗಾವ್ಯಾಟ್” ವಿದ್ಯುತ್ ಸಂಚಾರವಾಗುವುದು ಇಲ್ಲಿ. ಕಳೆದುಕೊಂಡ ಪಾಂಡುರಂಗನಿಗಾಗಿ ಪರಿತಪಿಸುತ್ತಾ, ತಾನು ಮಾಡಿದಕ್ಷಮ್ಯಪರಾಧದಿಂದಾದನಾಹುತಕ್ಕಾಗಿ ತನ್ನನ್ನು ತಾನೇ ಶಪಿಸಿಕೊಳ್ಳುತ್ತಾ, ಅಲೆಯುತ್ತಾ, ಕಂಡ-ಕಂಡವರನ್ನೆಲ್ಲಾ ಪಾಂಡುರಂಗನನ್ನು ಕಂಡಿರಾ ಎಂದು ಬೇಡಿಕೊಳ್ಳುತ್ತಾ, ಪಂಡರಾಪುರದವರೆಗೂ ಪ್ರಯಾಣ ಬೆಳೆಸಿ, ಪರಮಾತ್ಮನನ್ನು ನೋಡಲೇಬೇಕೆಂದು ಪರದಾಡುವ ಪರಮ ಭಕ್ತನಾಗಿ “ಅಣ್ಣಾವ್ರ” ಅಭಿನಯ …….. ವಾಹ್ ! ವಿಶ್ವದದ್ಯಾವ ನಟ ಮಾಡಿತೋರಿಸಬಲ್ಲ?
ದೇವರ ದೇವಾ ನೀನು, ಈ ಪಾಮರನಿಗದು ತಿಳಿಯದಾಯ್ತೇ? ವಿಠಲ, ಮಾಧವ! ಈ ಮಾನವನಿಗಷ್ಟಾದರೂ ಹೇಗೆ ಹೊಳೆದೀತು. ನಾನೊಬ್ಬ ಯಕಶ್ಚಿತ್ ನರಬೊಂಬೆ ಎಂದು ಗೋಳಿಡುತ್ತಾ ತನ್ನ ಆಳೆತ್ತರದ ದೇಹವನ್ನು ಆರಂಗುಲ ಮಾಡಿ ನೆರೆದಿದ್ದ ಭಕ್ತರನ್ನೆಲ್ಲಾ ಬೆರಗುಗೊಳಿಸುವ ಅಣ್ಣಾವ್ರ ಅಭಿನಯಕ್ಕೆ ಅಣ್ಣಾವ್ರೇ ಸಾಟಿ. ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ!
೨೬-೦೧-೨೦೧೦