ಮತ್ತೇ ಬರಲಾರಿರಾ ಅಶ್ವಥ್, ಅನಂತಸ್ವಾಮಿ, ಕಾಳಿಂಗರಾಯರೇ?


“ಅಯ್ಯೋ ವಿಧಿಯೇ! ಎಂಥಹ ಧ್ವನಿ ನಿಂತು ಹೋಯಿತು”. ಇದು ನನ್ನೊಬ್ಬನದಲ್ಲ. ಇಡೀ ಕನ್ನಡಿಗರೆದೆಯಾಳದಿಂದೊಟ್ಟಿಗೆ ಹೊರಬಂದ ನೋವಿನ ಮಾತುಗಳು. ಕನ್ನಡ ಸುಗಮ ಸಂಗೀತಲೋಕವನ್ನಾಳಿದ ದೊರೆ ಸಿ.ಅಶ್ವಥ್ ಅವರ ನಿರ್ಗಮದಿಂದ, “ಇನ್ನೆಲ್ಲಿ? ಮತ್ತೆ ಕನ್ನಡದಲ್ಲಿ, ಆ ವೈಭವದ ದಿನಗಳು” ಎಂದು ಕನ್ನಡ ಕಾವ್ಯ ಜಗತ್ತಿನ ಕುಲಬಾಂಧವರೆಲ್ಲಾ ಗೋಳಿಟ್ಟ ದುರ್ದಿನಳವು.

ಸುಗಮ ಸಂಗೀತ ಪಿತಾಮಹ ಕಾಳಿಂಗರಾಯರ ಕಾಲಾನಂತರ ಕನ್ನಡದಲ್ಲಿ ಮತ್ತೆ ಕನ್ನಡ ಕಾವ್ಯಗಳನ್ನು “ಜನಮನಗಳಿಗೆ ತಲುಪಿಸಲಾಗುವುದಿಲ್ಲವಲ್ಲಾ?” ಎಂದು ಎಲ್ಲಾ ಕೈಚೆಲ್ಲಿ ಕುಂತಿದ್ದ ಕಾಲವದು. ಕಾಳಿಂಗರಾಯರಷ್ಟೇ ಸಮರ್ಥ, ಪ್ರತಿಭಾವಂತ ಸುಗಮ ಸಂಗೀತಗಾರನೊಬ್ಬನಿಗಾಗಿ ಕಾಯುತ್ತಿದ್ದ ದಿನಗಳವು. ಏಕೆಂದರೆ, ಕರ್ನಾಟಕ ಏಕೀಕರಣದ ಚಳುವಳಿಗಳಲ್ಲಿ ಕನ್ನಡದ ನವೋದಯಕ್ಕಾಗಿ, ಕನ್ನಡನಾಡಿನ ಸ್ಥಾಪನೆಗಾಗಿ, ಕನ್ನಡಿಗರೆದೆಯಲ್ಲಿ ಕನ್ನಡಾಭಿಮಾನದ ಕಿಚ್ಚಿಡುವಂತೆ ಪ್ರಸಿದ್ಧ ಕವಿವರ್ಯರೆಲ್ಲಾ ರಚಿಸಿದ್ದ “ಉದಯವಾಗಲಿ ಚೆಲುವ ಕನ್ನಡನಾಡು”, “ಹಚ್ಚೇವು ಕನ್ನಡದ ದೀಪ”, “ಏರಿಸಿ ಹಾರಿಸಿ ಕನ್ನಡದ ಬಾವುಟ”, “ಬಾಗಿಲೊಳು ಕೈ ಮುಗಿದು”, “ಎಲ್ಲಾದರು ಇರು, ಎಂತಾದರೂ ಇರು” ಮುಂತಾದ ಕನ್ನಡ ಕಾವ್ಯಗಳನ್ನು ಸ್ವಾಭಿಮಾನಿ ಕನ್ನಡಿಗರೆಲ್ಲಾ ಒಕ್ಕೊರಲಿನಿಂದ ಹಾಡಬೇಕೆನಿಸುವಷ್ಟು ಪರಿಣಾಮಕಾರಿಯಾಗಿ ಕಾಳಿಂಗರಾಯರು ಹಾಡಿ ಕರ್ನಾಟಕದ ಜನರ ಮನಸ್ಸನ್ನು ಆಗಲೇ ಗೆದ್ದುಕೊಂಡಿದ್ದರು. ಇನ್ನು ದಾಸೋತ್ತಮರ “ನಗೆಯು ಬರುತಿದೆ”, “ಮಾಡು ಸಿಕ್ಕದಲ್ಲಾ”, “ಯಾರು ಹಿತವರು ನಿನಗೆ” ಇನ್ನಿತರೆ ಗೀತೆಗಳನ್ನು ಹಾಡಿದಾಗಲಂತೂ ಕಾಳಿಂಗರಾಯರು ತಮ್ಮನ್ನು “ಕರ್ನಾಟಕದ ಕೋಗಿಲೆ” ಎಂದು ಕನ್ನಡಿಗರೆಲ್ಲರಿಂದಲೂ ಅಕ್ಕರೆಯಿಂದ ಕರೆಸಿಕೊಂಡಿದ್ದರು. ನಂತರ ಜಿ.ಪಿ.ರಾಜರತ್ನಂ ಅವರ “ಎಂಡ್ಕುಡುಕ ರತ್ನ”ನನ್ನು ಜನ-ಜನಕ್ಕೂ ಪರಿಚಯಿಸಿದ ಕೀರ್ತಿಗೆ ಪಾತ್ರರಾದಾಗ “ಆಡು ಮುಟ್ಟದ ಸೊಪ್ಪಿಲ್ಲ, ಕಾಳಿಂಗರಾಯರು ಹಾಡಲಾಗದ ಹಾಡಿಲ್ಲ” ಎಂದೆನಿಸಿಕೊಂಡಿದ್ದರು. ಮಾಧುರ್ಯ ತುಂಬಿದ, ಕೇಳುಗರು ಮತ್ತೆ ಮತ್ತೆ ಕೇಳಬೇಕೆನಿಸುವಂತೆ ಮಾಡುವ, ತಮ್ಮ ಅಗಾಧ ಗಾಯನ ಸಾಮರ್ಥ್ಯ ಶಕ್ತಿಯನ್ನೆಲ್ಲಾ ಧಾರೆಯೆರೆದು ಹಾಡಿದ ಅವರ ಜಾನಪದಗೀತೆ, ಭಾವಗೀತೆಗಳಂತೂ ಹಳ್ಳಿ-ಹಳ್ಳಿ, ಗಲ್ಲಿ-ಗಲ್ಲಿಗಳಲ್ಲೆಲ್ಲಾ ಗುಂಯ್‍ಗುಟ್ಟುವಷ್ಟರ ಮಟ್ಟಿಗೆ ಪ್ರಸಿದ್ಧವಾದಾಗ, ಸಕಲ ಕನ್ನಡ ಕುಲಬಾಂಧವರಿಗೆಲ್ಲಾ ಕಾಳಿಂಗರಾಯರು ತುಂಬಾ ಹತ್ತಿರವಾಗಿಹೋಗಿದ್ದರು. ದೇಶಭಕ್ತಿ, ನಾಡಭಕ್ತಿ, ಜಾನಪದ, ಭಾವಗೀತೆ ಹೀಗೆ ಸುಗಮ ಸಂಗೀತದ ಎಲ್ಲಾ ಪ್ರಕಾರಗಳಲ್ಲೂ ಅವರು ವ್ಯಾಪಿಸಿಕೊಳ್ಳತೊಡಗಿದಾಗ ಕನ್ನಡಿಗರು ಕಾಳಿಂಗರಾಯರ ಉತ್ತರಾಧಿಕಾರಿಯೊಬ್ಬರ ಬಗ್ಗೆ ಸಹಜವಾಗಿಯೇ ಚಿಂತಿಸುವಂತೆ ಅವರು ಮಾಡಿದ್ದರು. ಇಂಥ ಬಹು ನಿರೀಕ್ಷೆಯ ದಿನಗಳಲ್ಲಿ, ಕಾಳಿಂಗರಾಯರಂಥ ದೈತ್ಯ ಪ್ರತಿಭೆಯ ಸ್ಥಾನ ತುಂಬಬಲ್ಲಷ್ಟು ದಕ್ಷತೆಯುಳ್ಳ ಸುಗಮ ಸಂಗೀತಗಾರನೊಬ್ಬನ ಉದಯವಾಗುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದುದರಿಂದಲೇ, ಅಂಥಹ ಒಂದು ಪ್ರತಿಭೆಯ ಆಗಮನಕ್ಕಾಗಿ ಕನ್ನಡದ ಜನ ತುಂಬಾ ದಿನಗಳೇ ಕಾಯಬೇಕಾಯಿತು.

ನಮ್ಮೆಲ್ಲರ ಸುಕೃತ ಹಾಗೂ ಭಗವಂತನ ಧಾರಾಳತನದ ಫಲವಾಗಿ ಒಂದನ್ನು ನಿರೀಕ್ಷಿಸಿದ್ದ ಕನ್ನಡಿಗರಿಗೆ ಎರಡನ್ನು ನೋಡುವ, ಕೇಳುವ, ಆನಂದಿಸುವ ಸೌಭಾಗ್ಯ ನಂತರದ ದಿನಗಳಲ್ಲಿ ದೊರೆಯಿತು. ಅದರ ಪರಿಣಾಮವಾಗಿಯೇ ಮೈಸೂರು ಅನಂತಸ್ವಾಮಿ ಹಾಗೂ ಸಿ, ಅಶ್ವಥ್‍ರಂಥಹ ಇಬ್ಬರು ಪ್ರತಿಭಾವಂತರ ಎಂಟ್ರಿ ಕನ್ನಡ ಸುಗಮ ಸಂಗೀತಲೋಕಕ್ಕಾದದ್ದು. ಅಲ್ಲದೇ, ಈ ಇಬ್ಬರೂ ಕೂಡ ಸ್ವತಃ ಸಂಗೀತಗಾರರೂ ಹಾಗೂ ಹಾಡುಗಾರರೂ ಆಗಿದ್ದರಿಂದ ಕನ್ನಡಿಗರ ಪಾಲಿಗೆ ಇನ್ನೊಂದು ಬಂಪರ್ ಕೊಡುಗೆಯಾಗಿ, ಕನ್ನಡದ ಆಸ್ತಿಯಾಗಿ ನಿಂತರವರು. ಇವರಿಬ್ಬರ ಸಂಗೀತ ಸೃಷ್ಟಿಯಲ್ಲಿ ಹಾಡುಗಳಾಗಿ ಹೊರಬಂದ ಕನ್ನಡ ಕಾವ್ಯಲೋಕದ ಕುಸುಮಗಳು ಹೇಗಿವೆಯೆಂದರೆ, ಒಂದಕ್ಕೊಂದು ತಮ್ಮ-ತಮ್ಮಲ್ಲೇ ಪೈಪೋಟಿ ನಡೆಸುವಂತಿವೆ. “ನಾ ಮುಂದು ತಾ ಮುಂದು” ಎಂದು ಗುದ್ದಾಡುವಂತಿವೆ. ಇಂದಿಗೂ, ಮುಂದೆಯೂ ಎಂದೂ ಬಾಡಿಹೋಗದಂತೆ ಕನ್ನಡಿಗರೆದೆಯಲ್ಲಿ ಶಾಶ್ವತ ಸ್ಥಾನ ಸಂಪಾದಿಸಿಕೊಂಡುಬಿಟ್ಟಿವೆ.

ಅನಂತಸ್ವಾಮಿಯವರಂಥಹ ಅನನ್ಯ ಪ್ರತಿಭೆಯಿಂದಷ್ಟೇ ಮಾಡಬಲ್ಲಂಥ “ಬದುಕು ಜಟಕಾ ಬಂಡಿ”, “ನಿತ್ಯೋತ್ಸವ”, “ಎಲ್ಲಿ ಜಾರಿತೋ ಮನವು”, “ಯಾವ ಮೋಹನ ಮುರಳಿ ಕರೆಯಿತೋ”, “ಅತ್ತಿತ್ತ ನೋಡದಿರು”, “ತಿಪ್ಪಾರಳ್ಳಿ ಬಲು ದೂರ”, “ಭಾರತ ಜನನಿಯ ತನುಜಾತೆ”, “ಎಳ್ಕಳ್ಳೋಕ್ಕೊಂದೂರು”, “ನಡೆದಿದೆ ಪೂಜಾರತಿ”, “ತಾರಕ್ಕೆ ಬಿಂದಿಗೆ “ಹೆಂಡತಿಯೊಬ್ಬಳು”, “ಬೆಣ್ಣೆ ಕದ್ದ ನಮ್ಮ ಕೃಷ್ಣ”, “ಕೋಳೀಕೆ ರಂಗಾ”, “ಐನೋರ್ ಹೊಲ್ದಾಗ್ ಚಾಕ್ರಿ ಮಾಡ್ತ”, “ಕುರಿಗಳು ಸಾರ್ ಕುರಿಗಳು” ಮುಂತಾದ ಹಾಡುಗಳು ಕಾವ್ಯರಸಿಕರ ನಿದ್ದೆಗೆಡಿಸುವಂತಿದ್ದರೆ, ಅಶ್ವಥ್‍ರಂಥ ಅಸಾಮಾನ್ಯ ಪ್ರತಿಭೆ ಮಾತ್ರ ಹೊರತರಬಲ್ಲ “ಮೈಸೂರು ಮಲ್ಲಿಗೆ”, “ಶ್ರಾವಣ”, “ಕನ್ನಡವೇ ಸತ್ಯ”, “ಅನುರಾಗ”, “ಅನಿಕೇತನ”, “ಸುಬ್ಬಾಭಟ್ಟರ ಮಗಳೇ”, “ದೀಪಿಕಾ”, “ಚೈತ್ರ”, “ಇರುವಂತಿಗೆ”, “ಶಿಶುನಾಳ ಷರೀಫ”ರ ಅನುಭಾವ ಗೀತೆಗಳ ಸಂಗ್ರಹದ ಧ್ವನಿಸುರಳಿಗಳು ಕನ್ನಡ ಸುಗಮಸಂಗೀತ ಪ್ರಪಂಚದ ಮೈಲಿಗಲ್ಲುಗಳಾಗಿ ನಿಲ್ಲುತ್ತವೆ. ಈ ಎರಡೂ ಶ್ರೇಷ್ಠ ಸಂಗೀತಗಾರರ ಹಾಡುಗಳು ಚಿರಕಾಲ, ಚಿರನೂತನವಾಗಿ ರಾರಾಜಿಸುತ್ತವೆ.

ಅಶ್ಬಥ್ ಅವರಂತೂ ಇನ್ನು ಸ್ವಲ್ಪ ಮುಂದೆ ಹೋಗಿ, ಚಿತ್ರರಂಗದವರೆಗೂ ತಮ್ಮ ಕೈಚಾಚಿ ಸೈ ಎನಿಸಿಕೊಂಡವರು. ಅವರ ಸಂಗೀತ ನಿರ್ದೇಶನದಲ್ಲಿ ಬಂದ ಕಾಕನ ಕೋಟೆ, ಸ್ಪಂದನ, ಆಸ್ಫೋಟ, ಚಿನ್ನಾರಿ ಮುತ್ತ, ನಾಗಮಂಡಲ ಮುಂತಾದ ಚಿತ್ರಗಳ ಹಾಡುಗಳ ಗುಣಮಟ್ಟ ಅವುಗಳನ್ನು ಕೇಳಿ ಆನಂದಿಸುವವರಿಗಷ್ಟೇ ಗೊತ್ತು. ಯಾರೂ ಅನುಕರಿಸಲಾರದ ಅವರ ಧ್ವನಿಯ ಶ್ರೇಷ್ಠತೆ, ಅವರ ಹಾಡುಗಳನ್ನು ಆಸ್ವಾದಿಸಿದವರಿಗಷ್ಟೇ ಗೊತ್ತು. ಭಾವತುಂಬಿ ಹಾಡುವುದರಲ್ಲಿ ಈ ಇಬ್ಬರೂ ಅಪ್ರತಿಮರಾಗಿದ್ದರಿಂದಲೇ ನಮಗೆಲ್ಲಾ “ಎದೆ ತುಂಬಿ ಹಾಡಿದೆನು”, “ಭೂಮಿ ತಬ್ಬಿದ್ ಮೋಡಿದ್ದಂಗೇ”, “ಅಂತರಂಗದಾ ಮೃದಂಗ”, “ನನ್ ಪುಟ್ನಂಜಿ ರೂಪ”, “ಓ ನನ್ನ ಚೇತನಾ”, “ನಾಕು ತಂತಿ”, “ಬಾ ಮಳೆಯೇ ಬಾ”, “ಹೊಂಗೆ ಸೊಂಪಾಗಿ”, “ಬಿಟ್ಟಿದ್ದೇ ಹೆಂಡ ಅಲ್ಲಿ”, “ತನುವು ನಿನ್ನದು ಮನವು ನಿನ್ನದು” ಮುಂತಾದ ರತ್ನದಂಥಹ ಹಾಡುಗಳನ್ನು ಅನಂತಸ್ವಾಮಿಯವರೂ, “ತರವಲ್ಲಾ ತಗಿ ನಿನ್ನಾ”, “ಒಂದಿರುಳು ಕನಸಿನಲಿ”, “ನಿನ್ನೊಲುಮೆಯಿಂದಲೇ”, “ಬಳೆಗಾರ ಚೆನ್ನಯ್ಯ”, “ಬಾರೇ ನನ್ನ ದೀಪಿಕಾ”, “ಆಕಾಶದ ನೀಲಿಯಲ್ಲಿ”, “ಯಾವುದೀ ಪ್ರವಾಹವು”, “ನಾಡ ದೇವಿಯೇ ಕಂಡೆ ನಿನ್ನ”, “ನೇಗಿಲ ಹಿಡಿದ ಹೊಲದೊಳು ಹಾಡುತಾ”, “ಬಣ್ಣಿಸಲೇ ಹೆಣ್ಣೇ”, “ಶ್ರಾವಣ ಬಂತು”, “ಎಲ್ಲೋ ಹುಡುಕಿದೆ”, “ಮೌನ ತಬ್ಬಿತು” ಮುಂತಾದ ಮುತ್ತಿನಂಥಹ ಹಾಡುಗಳನ್ನು ಅಶ್ವಥ್ ಅವರೂ ನಮಗಾಗಿ ಕೊಡಲು ಸಾಧ್ಯವಾದದ್ದು. ಇವಿಷ್ಟು ಕೆಲವು ಉದಾಹರಣೆಗಳಷ್ಟೇ. ಆದರೆ, ಇಂಥಹ ಅದೆಷ್ಟು ಹಾಡುಗಳನ್ನು, ಆಲ್ಬಂಗಳನ್ನು ಈ ಇಬ್ಬರು ಗಂಧರ್ವರು ಕನ್ನಡಕ್ಕಾಗಿ ಕೊಟ್ಟಿದ್ದಾರೆ ಎಂದು ನಾನಿಲ್ಲಿ ಹೇಳುವ ಅಗತ್ಯವಿಲ್ಲ. ಆದರೆ, ಇಂಥಹ ಮಹಾನ್ ಗಾಯಕದ್ವಯರನ್ನು ಕಳೆದುಕೊಂಡ ಕನ್ನಡ ಸುಗಮ ಸಂಗೀತಲೋಕ ಮಾತ್ರ ಭಾರಿ ಬಡವಾಗಿದೆ ಎಂದು ಹೇಳಬಲ್ಲೆ. ಯಾವುದೇ ಕನ್ನಡಿಗನ ಅಭಿಪ್ರಾಯವೂ ಇದೇ ಆಗಿದೆ ಎಂದು ನಾನು ಭಾವಿಸುತ್ತೇನೆ. “ಇನ್ನೆಲ್ಲಿ ಅಂಥಹ ಹಾಡುಗಳು?” ಎಂದು ನೋವಿನಿಂದ ಕಂಗೆಟ್ಟಿರುವ ಕನ್ನಡ ಸುಗಮ ಸಂಗೀತ ಕೇಳುಗ, ಭವಿಷ್ಯವನ್ನು ನಿರಾಶೆಯಿಂದ ನೋಡುವಂತಾಗಿದೆ ಎಂದು ಅಂದುಕೊಳ್ಳುತ್ತೇನೆ.

ಪರಿಣಾಮವಾಗಿ ಕನ್ನಡದ ಜನಕ್ಕೆ ಕಾಳಿಂಗರಾಯರ ನಂತರದ ದಿನಗಳಂತೆ “ಮತ್ತದೇ ಬೇಸರ”, ಮತ್ತದೇ ನಿರೀಕ್ಷೆ, ಈ ಶೂನ್ಯತೆಯನ್ನು ಮತ್ತೆ ತುಂಬಬೇಕಾದ ಅನಿವಾರ್ಯತೆ. ಕನ್ನಡ ಸುಗಮ ಸಂಗೀತಪ್ರಿಯರೊಂದಿಗೆ ಮುನಿಸಿಕೊಂಡಿರುವ ದೇವರಲ್ಲಿ “ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು” ಎಲ್ಲಾ ಕನ್ನಡ ರಸಿಕರ ಮನಮನಗಳಲ್ಲೂ ರಾರಾಜಿಸಿದ ಕಾಳಿಂಗರಾಯರು, ಅನಂತಸ್ವಾಮಿ ಹಾಗೂ ಸಿ.ಅಶ್ವಥ್ ಅವರಂಥ ಅದ್ವಿತೀಯ ಗಾನಗಂಧರ್ವರು ಮತ್ತೆ ಹುಟ್ಟಿಬರಲಿ ಎಂಬ ಬೇಡಿಕೆ.

೦೩-೦೯-೨೦೧೦

You may also like...

Leave a Reply