ವಾಣಿಯ ವೀಣೆಯ ಝೇಂಕಾರದಲಿ …
ಗಾನ ಸರಸ್ವತಿ ವಾಣಿಜಯರಾಂ ಧ್ವನಿ ಜೀವಜಲ, ಅದು ಒತ್ತಡದ ಬದುಕಿಗೊಂದು ಸಿಧ್ದೌಷಧಿ, ನೊಂದ ಮನಸ್ಸುಗಳಿಗೆ ಮುದನೀಡವ ಮಂದಾನಿಲ, ದಿನದ ಬಾಧೆಗಳೆಲ್ಲವನ್ನೂ ಮರೆಸಿ ಮಲಗಿಸುವ ಜೋಗುಳ. ನಾನು ವಾಣಿಜಯರಾಂ ಹಾಡಿರುವ ಕನ್ನಡ ಚಲನ ಚಿತ್ರ ಗೀತೆ, ಭಾವಗೀತೆ ಹಾಗೂ ಭಕ್ತಿಗೀತೆಗಳೆಲ್ಲವನ್ನು ಬಹುಪಾಲು ಕೇಳಿ ಮೈ-ಮನ ತುಂಬಿಸಿಕೊಂಡಿದ್ದೇನೆ. ಜೊತೆಗೆ, ಅವರ ಹಿಂದೀ ಹಾಡುಗಳು, ಗಜಲ್‍ಗಳು, ಭಜನ್‍ಗಳು, ಸಂಸ್ಕೃತ ಶ್ಲೋಕಗಳು ಎಲ್ಲವನ್ನೂ ಅಕ್ಷರಾದಿಯಾಗಿ ಆನಂದಿಸಿದ್ದೇನೆ. ಪ್ರತಿಯೊಂದು ಹಾಡಿನಲ್ಲೂ ಅವರು ಭಾಷೆಯನ್ನು ಬಳಸುವ ರೀತಿ, ಭಾವ ತುಂಬಿ ಹಾಡುವ ಗಾಯನ, ಸ್ವರಗಳ ಏರಿಳಿತದಲ್ಲಿ ಮಾಡುವ ಮೋಡಿ, ಹಿಡಿದ ಶೃತಿಯನ್ನು ಕೂದಲೆಳೆಯಷ್ಟೂ ಸಡಿಲಿಸದೆ ಪ್ರತೀ ಹಾಡನ್ನು ಶುರುಮಾಡುವ ಪರಿ, ಹಾಗೇ ಅವರೋಹಣದಲ್ಲಿ ಹಾಡನ್ನು ಅಂತ್ಯಗೊಳಿಸುವ ವೈಖರಿ…, ಇವೆಲ್ಲಾ ಇಡೀ ದೇಹವನ್ನೇ ಹೊತ್ತು ಮತ್ತೊಂದು ಲೋಕಕ್ಕೆ ಹೊಯ್ಯುತ್ತವೆ. ಸಾಕ್ಷಾತ್ ವಾಣಿಯೇ ನಮಗಾಗಿ ಬಂದು ಕಣ್ಮರೆಯಾಗಿ ಹೋದಳೇನೋ ಎಂದೆನ್ನಿಸುತ್ತದೆ.
ಹಾಗೆ ನೋಡಿದರೆ, ವಾಣಿಜಯರಾಂ ಅವರು ಚಲನಚಿತ್ರ ಹಿನ್ನಲೆ ಗಾಯಕಿಯಾಗಲು ಒಪ್ಪಿದ್ದೇ ಭಾರತೀಯ ಚಿತ್ರರಂಗದ ಪುಣ್ಯವಿಶೇಷ. ಸಮಗ್ರ ಭರತಖಂಡದಲ್ಲಿ ಇನ್ನೊರ್ವ ಎಂ.ಎಸ್. ಸುಬ್ಬುಲಕ್ಷ್ಮಿಯೋ ಅಥವಾ ಎಂ.ಎಲ್. ವಸಂತಕುಮಾರಿಯೋ ಆಗಲು ಬೇಕಾಗಿದ್ದ ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದ ವಾಣಿಜಯರಾಂ ಚಿತ್ರರಂಗಕ್ಕೆ ಪರಿಚಯವಾದದ್ದೇ ಅವರ ಶಾಸ್ತ್ರೀಯ ಹಿನ್ನಲೆಯಿಂದ. ಬೇರೆ ಗಾಯಕಿಯರಂತೆ ಮೊದಲು ಚಿತ್ರರಂಗಕ್ಕೆ ಬಂದು ನಂತರ ಉಳುವಿಗಾಗಿ ಶಾಸ್ತ್ರೀಯಭ್ಯಾಸ ಮಾಡಿದವರಲ್ಲ. ಆದುದರಿಂದಲೇ ಅವರೊಬ್ಬ ಪರಿಪೂರ್ಣ ಗಾಯಕಿ. ಪ್ರತಿಭೆ, ಗಾಯನ, ಸ್ವರ ಜ್ಞಾನ, ಭಾಷೋಚ್ಚಾರಣೆ ಇವೆಲ್ಲದರಲ್ಲೂ ಮಿಕ್ಕೆಲ್ಲಾ ಗಾಯಕಿಯರಿಗಿಂತಲೂ ಶ್ರೇಷ್ಠ. ಇಂಥಹ ಅಪೂರ್ವ, ಪ್ರತಿಭಾವಂತ ಗಾಯಕಿಗೆ ಬೇಕಾದಷ್ಟು ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿದ್ದರೂ ಅವರಿಗೆ ಅನ್ಯಾಯವಾದದ್ದೇ ಹೆಚ್ಚು. ಅವರು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಗುರುತಿಸಬೇಕಾಗಿದ್ದ, ಪ್ರತಿ ಮನೆಯಲ್ಲೂ ಮಾತನಾಡಿಕೊಳ್ಳಬೇಕಾಗಿದ್ದ, ಪ್ರತಿ ಯುವ ಗಾಯಕಿಯೂ ಅನುಸರಿಸಿ, ಆದರಿಸಬೇಕಾಗಿದ್ದ ಆದರ್ಶ ಸ್ವರ ಸಾಮ್ರಾಜ್ಞಿ.
ವಾಣಿಜಯರಾಂ ಇಂಥಹ ವಿಶೇಷ ಪ್ರತಿಭೆ ಹೊಂದಿದ್ದರೂ, ಬೇರೇ ಗಾಯಕಿಯರಿಗಿಂತ ವಯಸ್ಸಿನಲ್ಲಿ ಕಿರಿಯರು. ಆ ಕಾರಣದಿಂದಲೇ ಅವರು ಚಿತ್ರರಂಗಕ್ಕೆ ಬಂದದ್ದು ತಡವಾಗಿ ಅಂದರೆ, ಸುಮಾರು ಎಪ್ಪತ್ತರ ದಶಕದಲ್ಲಿ. ಇಡೀ ಚಿತ್ರರಂಗದ ಅಂದಿನ ದಿಗ್ಗಜ ಗಾಯಕಿಯರಿಗೆಲ್ಲಾ ದುಃಸ್ವಪ್ನವಾಗಿ ಪರಿಚಯವಾದವರು. ಅವರ ಈ ಆರ್ಭಟದ ಆಗಮನವನ್ನು, ಈ ಹಿಂದೆ ಆಗಲೇ ಆಳವಾಗಿ ಬೇರೂರಿದ್ದ ಅನೇಕ ಗಾಯಕಿಯರು ಸಹಿಸಿಕೊಳ್ಳಲಿಲ್ಲ. ಈಗಾಗಲೇ ಇತಿಹಾಸದಲ್ಲಿ ದಾಖಲಾಗಿರುವಂತೆ, ಲತಾ ಮಂಗೇಷ್ಕರ್ ಆದಿಯಾಗಿ ಎಲ್ಲರೂ ವಾಣಿ ಜಯರಾಂ ಅವರ ಪ್ರತಿಭೆ ಕಂಡು ಕರುಬಿದವರೇ, ಅಷ್ಟೇ ಅಲ್ಲಾ! ಕೈ-ಕೈ ಹಿಚುಕಿಕೊಂಡು ಅಸೂಯೆಪಟ್ಟವರೇ. Bollywood ವಾಣಿಜಯರಾಂ ಅವರನ್ನು ಸ್ವಾಗತಿಸುವ ಬದಲಾಗಿ ಅವರನ್ನು ನಿರ್ಲಕ್ಷಿಸಿ, ಅವರ ಓಟಕ್ಕೆ ತಡೆಯೊಡ್ಡಿತು. ಪರಿಣಮವಾಗಿ, ಹಿಂದಿ ಭಾಷೆಯಲ್ಲೂ ಅಗಾಧ ಹಿಡಿತವಿದ್ದ ವಾಣಿಜಯರಾಂ ಅಲ್ಲಿ ನೆಲೆಯೂರುವ ಮೊದಲೇ, ಅದು ಬಹು ಬೇಗನೆ ಹೊರಹಾಕಿತು. ನಂತರದ ದಿನಗಳಲ್ಲಿ ದಕ್ಷಿಣಕ್ಕೆ ಬಂದ ಅವರನ್ನು ಸರಿಯಾಗಿ ಉಪಯೋಗಿಸಿಕುಳ್ಳುವಲ್ಲಿ ದಕ್ಷಿಣ ಚಿತ್ರರಂಗವೂ ಎಡವಿತು. ಎಲ್ಲಾ ಮಾದರಿಯ ಹಾಡುಗಳಿಗೂ, ಎಲ್ಲಾ ವರ್ಗದ ಪಾತ್ರಗಳಿಗೂ, ಎಲ್ಲಾ ವಯಸ್ಸಿನ ಕಲಾವಿದೆಯರಿಗೂ ಪ್ರಮುಖ ಧ್ವನಿಯಾಗಬಹುದಾಗಿದ್ದ ವಾಣಿಜಯರಾಂ ಅವರನ್ನು ಅದು ಸೀಮಿತಗೊಳಿಸಿತು.
ಕನ್ನಡ ಚಿತ್ರರಂಗ ಕೂಡ ಅವರಿಗಿದ್ದ ಅಪರಿಮಿತ ಪ್ರತಿಭೆಯನ್ನಾಗಲೀ, ಅನ್ಯ ಭಾಷಿಕರಾಗಿಯೂ ಕನ್ನಡ ಪದಬಳಕೆಯಲ್ಲಿ ಅವರು ತೋರಿದ ಫ್ರೌಡಿಮೆಯನ್ನಾಗಲೀ, ಹಾಡಿನ ಸಾಹಿತ್ಯ ಸೂಕ್ಸ್ಮತೆಗಳನ್ನು ಅರ್ಥೈಸಿಕೊಂಡು, ಅದಕ್ಕೆ ಭಾವ ತುಂಬಿ ಹಾಡುತ್ತಿದ್ದ ರೀತಿಯನ್ನಾಗಲೀ ಅಥವಾ ಅವರ ಹಾಡುಗಳ ಶ್ರೇಷ್ಟತೆಯ ಹಿಂದಿನ ಶ್ರಮವನ್ನಾಗಲೀ ಗಮನಿಸಲೇ ಇಲ್ಲ. ವಿಜಯಭಾಸ್ಕರ್ ಹಾಗೂ ಎಂ.ರಂಗರಾವ್ ಹೊರತಾಗಿ ಮಿಕ್ಕ ಸಂಗೀತ ನಿರ್ದೇಶಕರು ವಾಣಿಜಯರಾಂ ಅವರಿಗೆ ಬೇರೆ ಗಾಯಕಿಯರು ಕಠಿಣ ಎಂದು ಕೈಬಿಟ್ಟ ಹಾಡುಗಳನ್ನು ನೀಡಿದರೇ ಹೊರತು ಅವರ ಸಾಮರ್ಥ್ಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲಿಲ್ಲ. ಹಾಗೊಂದು ವೇಳೆ ಅದನ್ನು ಸರಿಯಾಗಿ ಬಳಸಿಕೊಂಡಿದ್ದರೆ, ಇನ್ನೂ ಸಹಸ್ರಾರು ಸುಶ್ರಾವ್ಯವಾದ ಚಿತ್ರಗೀತೆಗಳು ಕನ್ನಡ ಚಿತ್ರರಸಿಕರ ಮನಸ್ಸಲ್ಲಿ ಮನೆ ಮಾಡಿರುಕೊಂಡಿರುತ್ತಿದ್ದವು. ರಾಜನ್-ನಾಗೇಂದ್ರ ಸಂಗೀತ ಸಂಯೋಜನೆಯಲ್ಲಿ ಹಾಡಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್ ಹಾಡುಗಳೇ. ಉದಾಹರಣೆಗೆ, “ಎಂದೆಂದು ನಿನ್ನನು ಮರೆತು”, “ಮಧುಮಾಸ ಚಂದ್ರಮ”, “ಸುತ್ತ ಮುತ್ತ ಯಾರೂ ಇಲ್ಲ”, “ಶ್ರೀ ಕೃಷ್ಣ ಜನಿಸಿದ ಧರೆಯಲ್ಲಿ”, “ನಾ ನಿನ್ನಾ ಮರೆಯಲಾರೆ”, “ಕಸನಲೂ ನೀನೆ”, “ಮುತ್ತು ಮಳೆಗಾಗಿ”, “ಬಿರುಗಾಳಿ ಮನದಲ್ಲಿ”… ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೂ ಈ ಜೋಡಿ ವಾಣಿಜಯರಾಂ ಅವರನ್ನು ಉಪಯೋಗಿಸಿಕೊಂಡದ್ದು ತುಂಬಾ ಕಡಿಮೆ. ಅಷ್ಟೇಕೆ? ನಮ್ಮ ಸರ್ಕಾರ ಕೂಡ ಅನರ್ಹರೆಲ್ಲರಿಗೂ ಸಂದಾಯ ಮಾಡಿರುವ “ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿ”ಯನ್ನು ಅತ್ಯರ್ಹರಾದ “ಪದ್ಮಭೂಷಣ” ಕಿರೀಟಿ ವಾಣಿಜಯರಾಂ ಅವರಿಗೆ ಮಾತ್ರ ಕೊಡಮಾಡದೆ ಅವಮಾನಿಸಿಕೊಂಡಿತು.
ಇಂದಿಗೂ ಬಹುಪಾಲು ಕನ್ನಡಿಗರಿಗೆ ವಾಣಿ ಜಯರಾಂ ಪರಿಚಯವಿಲ್ಲ. ಅವರ ನೂರಾರು ಸೂಪರ್ ಹಿಟ್ ಹಾಡುಗಳನ್ನು ಕೇಳಿ ಆನಂದಿಸಿದ್ದರೂ, ಅವುಗಳನ್ನು ಹಾಡಿರುವುದು ಈ ಮಹಾನ್ ಗಾಯಕಿಯೇ ಎಂದು ಮುಕ್ಕಾಲು ಭಾಗ ಕನ್ನಡಿಗರಿಗೆ ಗೊತ್ತಿಲ್ಲ. ಕೆಲವರು ಎಸ್.ಜಾನಕಿ, ಪಿ.ಸುಶೀಲ ಅಥವಾ ಬೇರೆ ಯಾರೋ ಹಾಡಿರಬಹುದೆಂದು ಎಂದು ಇಂದಿಗೂ ನಂಬಿದ್ದಾರೆ. ಏಕೆಂದರೆ, ಮಿಕ್ಕ ಪ್ರಮುಖ ಗಾಯಕಿಯರಿಗೆ ಸಿಕ್ಕ ಪ್ರಚಾರವಾಗಲಿ ಅಥವಾ ಪ್ರಶಂಸೆಗಳಾಗಲಿ ವಾಣಿಜಯರಾಂ ಅವರಿಗೆ ಸಿಗಲಿಲ್ಲ. ಬಹುಶಃ ಇಲ್ಲಿ ಅವರ ಕೆಲವು ಹಾಡುಗಳನ್ನು ಪಟ್ಟಿ ಮಾಡಿ ತೋರಿಸಿದರೆ, ಹೌದೇ? ಇವೆಲ್ಲಾ ವಾಣಿಜಯರಾಂ ಕಂಠದಿಂದ ಹೊರಹೊಮ್ಮಿರುವ ಹಾಡೇ? ಎಂದು ಖಂಡಿತಾ ಅಚ್ಚರಿ ಪಡುವುದರಲ್ಲಿ ಸಂಶಯವಿಲ್ಲ. ಇಂಥಹಾ ಅದ್ಭುತ ಗಾನಕೋಗಿಲೆ ನಮ್ಮ ಜೀವಿತಾವಧಿಯಲ್ಲಿ ನಮ್ಮೊಡನೇ ಇದ್ದುದ್ದೇ ನಮ್ಮೆಲ್ಲರ ಸುಕೃತ.
ವಾಣಿಜಯರಾಂ ತಮ್ಮ ಹಾಡುಗಳಲ್ಲಿ ಕನ್ನಡವನ್ನು ಅದೆಷ್ಟು ಸುಸ್ಪಷ್ಟವಾಗಿ ಬಳಕೆಮಾಡಿದ್ದಾರೆಂಬುದನ್ನು ಕನ್ನಡ ಚಿತ್ರರಸಿಕರು ಗಮನಿಸಿದಂತೆ ಕಾಣುತ್ತಿಲ್ಲ. ಅವರ ಸಹ ಗಾಯಕ, ಗಾಯಕಿಯರಿಗೆ ಹೋಲಿಸಿದರೆ ವಾಣಿಜಯರಾಂ ಧ್ವನಿಯಲ್ಲಿನ ಕನ್ನಡ ಪದಬಳಕೆ ಹಾಗೂ ಪ್ರತಿ ಅಕ್ಷರವನ್ನೂ ಉಚ್ಚರಿಸುವುದರಲ್ಲಿರುವ ಸ್ಪಷ್ಟತೆ ತುಂಬಾ ಅಚ್ಚುಕಟ್ಟಾಗಿದೆ. ಆವರ ಧ್ವನಿಯಲ್ಲಿನ ಮಾಧುರ್ಯ, ಭಾವ, ಸ್ವರಾಲಾಪನೆ ಮನಸ್ಸು ಮಿಡಿಯುವಂತಿದೆ. ಬಹುಶಃ, ಈ ಲೇಖನ ಓದಿದ ನಂತರ ವಾಣಿ ಜಯರಾಂ ಹಾಡುಗಳನ್ನೊಮ್ಮೆ ಏಕಾಂತದಲ್ಲಿ ಕೇಳಿ ನೋಡಿ. ಅದು ಅಲ್ಪಪ್ರಾಣ ಮಹಾಪ್ರಾಣವಾಗಿರಲಿ, ಒತ್ತಕ್ಷರವಾಗಿರಲಿ, ’ಅ’ ಕಾರ ’ಹ’ ಕಾರ, ’ಸ’ ಕಾರ ’ಶ’ ಕಾರ ’ಷ’ ಕಾರ ಹೀಗೇ… ಎಂಥಾ ಸಣ್ಣ ಸಣ್ಣ ಸಂಗತಿಗಳೇ ಅವಾಗಿರಲಿ, ಅವುಗಳನ್ನೆಲ್ಲಾ ತುಂಬಾ ಕರಾರುವಕ್ಕಾಗಿ ಉಚ್ಚರಿಸಿ ವಾಣಿಜಯರಾಂ ಹಾಡುವುದನ್ನು ಕೇಳುವಾಗ ಮನೋಲ್ಲಾಸವಾಗುವುದರ ಜೊತೆಗೆ, ಹಾಡುಗಳ ಸಾಹಿತ್ಯ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅವರ ಒಂದೊಂದು ಹಾಡೂ ಆಪಾದಮಸ್ತಕದವರೆಗೆ ರೋಮಾಂಚನಗೊಳಿಸುತ್ತವೆ. ರಕ್ತನಾಳಗಳಲ್ಲೆಲ್ಲಾ ನಾಟ್ಯವಾಡುತ್ತವೆ. ಹೃನ್ಮನಗಳನ್ನೆಲ್ಲಾ ತಣಿಸಿ ತಂಪೆರೆಯುತ್ತವೆ. ಇನ್ನು ಸಂಸ್ಕೃತ ಶ್ಲೋಕ ಹಾಗೂ ಇಂಗ್ಲೀಷ್ ಹಾಡುಗಳಲ್ಲಂತೂ ವಾಣಿಜಯರಾಂ ಮೀರಿಸುವ ಇನ್ನೊಬ್ಬ ಹಿನ್ನಲೆ ಗಾಯಕಿಯನ್ನು ಅವರ ಜಾಗದಲ್ಲಿ ಊಹಿಸಲೂ ಅಸಾಧ್ಯ!
ವಾಣಿಜಯರಾಂ, ಸರಿ ಸುಮಾರು ಹದಿನೈದಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿ ಆ ಎಲ್ಲಾ ಭಾಷಿಕರನ್ನೂ ತಮ್ಮ ಮಾಂತ್ರಿಕ ಗಾಯನದಿಂದಷ್ಟೇ ಅಲ್ಲ, ಆ ನೆಲದ ಭಾಷೆಯಯನ್ನು ಅರಿತು ಹಾಡುತ್ತಾ ಗೆದ್ದವರು. ಆದ್ದರಿಂದಲೇ, ಎಲ್ಲಾ ಭಾಷೆಯ ಸ್ತೋತೃಗಳೂ ವಾಣಿಜಯರಾಂ ಅವರ ಗಾಯನವನ್ನು ನಿರಂತರವಾಗಿ ಆನಂದಿಸಿದ್ದಾರೆ ಮಾತ್ರವಲ್ಲ ಅಭಿನಂದಿಸಿದ್ಡಾರೆ. ಅವರಿಗೆ ಮೊದಲ ಶ್ರೇಷ್ಟ ಗಾಯಕಿ ರಾಷ್ಟ್ರಪ್ರಶಸ್ತಿ ಸಂದಾಯವಾದದ್ದೇ ಗುಜರಾತಿ ಭಾಷೆಯ ಹಾಡಿಗಾಗಿ. ಮರಾಠದಲ್ಲಿ ಶಾಲಾ ಪ್ರಾರ್ಥನ ಗೀತೆಯಾಗಿ ವಾಣಿ ಜಯರಾಂ ಅವರ ಹಾಡು ಇಂದಿಗೂ ಹಾಡಲ್ಪಡುತ್ತಿದೆ. ನಾನು ತೀವ್ರಾಸಕ್ತಿಯಿಂದ ನನ್ನ ಕೆಲವು ಪಂಜಾಬಿ, ಮರಾಠಿ, ಒರಿಯಾ, ಗುಜರಾತಿ, ಉರ್ದು ಗೆಳೆಯರನ್ನು ಈ ಬಗ್ಗೆ ವಿಚಾರಿಸಿದಾಗ, ಅವರೆಲ್ಲಾ ವಾಣಿಜಯರಾಂ ಧ್ವನಿಯಲ್ಲಿ ಭಾಷೆಯ ನಿಖರತೆಯ ಬಗ್ಗೆಯೇ ಹೆಚ್ಚಾಗಿ ಹೇಳುತ್ತಾರೆ. ಮಾತ್ರವಲ್ಲ, ಅವರೊಬ್ಬ ದಕ್ಷಿಣದ ಗಾಯಕಿಯೆಂಬುದನ್ನು ನಂಬುವುದೇ ಕಷ್ಟ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ವಾಣಿಜಯರಾಂ ಅವರು ಯಾವ ಭಾಷೆಯನ್ನೂ ಲಘುವಾಗಿ ಪರಿಗಣಿಸದೆ ಅದಕ್ಕೆ ಅಗತ್ಯವಿರುವ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುವುದರ ಜೊತೆಗೆ, ಹಾಡಿನ ಅಭ್ಯಾಸವನ್ನೂ ಮಾಡಿಕೊಳ್ಳುತ್ತಿದ್ದುದ್ದರ ಹಿಂದಿದ್ದ ಶ್ರಮ ನಿಜಕ್ಕೂ ಅವರ ನಿಷ್ಠೆ ಹಾಗೂ ಶ್ರೇಷ್ಠತೆಯನ್ನು ತೋರಿಸುತ್ತದೆ. ಜೊತೆಗೆ, ಅವನ ಸುಸಂಸ್ಕೃತ ನಡವಳಿಕೆ, ಸರಳ, ಸಜ್ಜನಿಕೆಯ ಸ್ವಭಾವ ಇವೆಲ್ಲಕ್ಕೂ ಕಲಶವಿಟ್ಟಂತೆ ಶೋಭಿಸುತ್ತದೆ. ಇಂಥಹ ವಾಣಿಯಮ್ಮ ನಮ್ಮನ್ನಗಲಿ ಇಂದಿಗೆ ಎರಡು ವರ್ಷಗಳೇ ಕಳೆದುಹೋದವು. ತಾಯಿ, ನಿಮ್ಮ ಗಾನಸುಧೆ ನನ್ನಂಥ ಕೋಟ್ಯಾನುಕೋಟಿ ಆರಾಧಕರ ಮನಸ್ಸಿಗೆ ನಿತ್ಯವೂ ತಂಪನೆರೆಯುತ್ತಾ ಸಂತೋಷಗೊಳಿಸುತ್ತಿದೆ. ನಮ್ಮೆಲ್ಲರ ನಿರುತ್ಸಾಹವನ್ನು ದೂರಮಾಡಿ ಜೀವನೋತ್ಸಾಹವು ಹಿಂಗಿಹೋಗದಂತೆ ಹಿಡಿದಿಡುತ್ತದೆ. ಸೋತ ದಿನಗಳಲ್ಲಿ, ಸತ್ತ ಬದುಕಿನಲ್ಲಿ ನಿಮ್ಮ ಅಮರ ಗಾಯನಮೃತ ಪುನರ್ಜನ್ಮ ನೀಡುತ್ತದೆ. ಗಂಧರ್ವ ಗಾನ ಕೋಗಿಲೆಗೆ ನನ್ನ ಪ್ರಣಾಮಗಳು!!!
೦೪-೦೨-೨೦೨೪